ಭಾರತೀಯರಲ್ಲದವರಿಗೆ ಆರ್‌ಟಿಐ ಅಡಿ ಮಾಹಿತಿ ನಿರಾಕರಿಸುವಂತಿಲ್ಲ: ದಿಲ್ಲಿ ಹೈಕೋರ್ಟ್‌

Update: 2023-03-20 12:02 GMT

ಹೊಸದಿಲ್ಲಿ: ಮಾಹಿತಿ ಹಕ್ಕು ಕಾಯಿದೆ (ಆರ್‌ಟಿಐ) ಅಡಿಯಲ್ಲಿ ಸಂಬಂಧಿತ  ಪ್ರಾಧಿಕಾರಗಳಿಂದ ಮಾಹಿತಿಯನ್ನು ಕೋರುವುದರಿಂದ ಭಾರತೀಯಲ್ಲದವರಿಗೆ ಯಾವುದೇ ನಿರ್ಬಂಧವಿಲ್ಲ, ಈ ಆರ್‌ಟಿಐ ಪ್ರಯೋಜನ ಕೇವಲ ದೇಶದ ನಾಗರಿಕರಿಗೆ ಮಾತ್ರ ಲಭ್ಯ ಎಂದು ಹೇಳುವುದು ಸರಿಯಾಗದು, ಎಂದು ದಿಲ್ಲಿ ಹೈಕೋರ್ಟ್‌ ಹೇಳಿದೆ.

ಭಾರತೀಯ ನಾಗರಿಕರಲ್ಲದವರಿಗೆ ಆರ್‌ಟಿಐ ಅಡಿಯಲ್ಲಿ ಮಾಹಿತಿ ಕೋರುವುದಕ್ಕೆ ಸಂಪೂರ್ಣ ನಿಷೇಧ ಹೇರುವುದು ಈ ಕಾಯಿದೆಯ ಉದ್ದೇಶ ಮತ್ತು ಗುರಿಗೆ ವಿರುದ್ಧವಾಗಬಹುದು ಎಂದು ನ್ಯಾಯಾಲಯ ಹೇಳಿದೆ.

ವ್ಯಕ್ತಿಯೊಬ್ಬರ ಜೀವನ ಅಥವಾ ಸ್ವಾತಂತ್ರ್ಯಕ್ಕೆ ಸಂಬಂಧಿಸಿರಬಹುದಾದ ಮಾಹಿತಿ ಒದಗಿಸಲು ಆರ್‌ಟಿಐ ಬಹಳಷ್ಟು ಮಹತ್ವ ನೀಡುತ್ತದೆ ಎಂದು ನ್ಯಾಯಾಲಯ ಹೇಳಿದೆ. ಇಲ್ಲಿ ಜೀವನ ಮತ್ತು ಸ್ವಾತಂತ್ರ್ಯ ಭಾರತೀಯರಲ್ಲದವರ ಅಂದರೆ ವಿದೇಶೀಯರ, ಎನ್ನಾರೈಗಳ ಮತ್ತು ಇತರರ ವಿಚಾರವಾಗಿರಬಹುದು, ಎಂದು ಇತ್ತೀಚಿನ ಆದೇಶದಲ್ಲಿ ಜಸ್ಟಿಸ್‌ ಪ್ರತಿಭಾ ಸಿಂಗ್‌ ಹೇಳಿದ್ದಾರೆ.

ದೇಶದ ನಾಗರಿಕರಲ್ಲದ ಅರ್ಜಿದಾರರು ಕೋರಿದ ಮಾಹಿತಿಯನ್ನು ಬಹಿರಂಗಪಡಿಸಬಹುದೇ ಎಂಬುದು ಸಂಬಂಧಿತ ಪ್ರಾಧಿಕಾರದ ವಿವೇಚನೆಗೆ ಬಿಟ್ಟ ವಿಚಾರವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಈ ನಿರ್ದಿಷ್ಟ ಪ್ರಕರಣದಲ್ಲಿ ಟಿಬೆಟನ್‌ ರಾಷ್ಟ್ರೀಯರೊಬ್ಬರು ಸೆಂಟ್ರಲ್‌ ಟಿಬೆಟನ್‌ ಸ್ಕೂಲ್ಸ್‌ ಅಡ್ಮಿನಿಸ್ಟ್ರೇಶನ್‌ ಕುರಿತು ಮಾಹಿತಿ ಕೇಳಿದ್ದರಲ್ಲದೆ ಪೌರತ್ವ ಕಾಯಿದೆಯಡಿ ತಮ್ಮನ್ನು ಭಾರತೀಯ ನಾಗರಿಕರೆಂದು ಪರಿಗಣಿಸಬಹುದು ಎಂದೂ ಹೇಳಿದ್ದರು.

ಆರ್‌ಟಿಐ ಅರ್ಜಿದಾರನ ಪರ ಆದೇಶ ನೀಡಿದ್ದ ಮುಖ್ಯ ಮಾಹಿತಿ ಆಯುಕ್ತರು, ಮಾಹಿತಿ ಒದಗಿಸಲು ನಿರಾಕರಿಸಿದ್ದ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ದಂಡ ವಿಧಿಸಿದ್ದರು.

ಸಾರ್ವಜನಿಕ ಮಾಹಿತಿ ಅಧಿಕಾರಿಯು ಮುಖ್ಯ ಮಾಹಿತಿ ಆಯುಕ್ತರ ಆದೇಶಕ್ಕೆ ಬದ್ಧರಾಗಬೇಕು ಮತ್ತು ಅರ್ಜಿದಾರರು ಕೇಳಿದ ಮಾಹಿತಿ ಒದಗಿಸಬೇಕು ಎಂದು ನ್ಯಾಯಾಲಯ ಹೇಳಿದೆ.

Similar News