ಧಾರ್ಮಿಕ ಚಿಹ್ನೆ ಹೊಂದಿರುವ ಪಕ್ಷಗಳನ್ನು ನಿಷೇಧಿಸುವ ಅರ್ಜಿಯಲ್ಲಿ BJPಯನ್ನೂ ಸೇರಿಸಿ:ಸುಪ್ರೀಂಗೆ ಮುಸ್ಲಿಂ ಲೀಗ್‌ ಮನವಿ

Update: 2023-03-20 12:07 GMT

ಹೊಸದಿಲ್ಲಿ: ಬಿಜೆಪಿಯ (BJP) ಚಿಹ್ನೆ "ಕಮಲ" (Lotus) ಕೂಡ ಧಾರ್ಮಿಕ ಚಿಹ್ನೆಯಾಗಿರುವುದರಿಂದ ಧಾರ್ಮಿಕ ಹೆಸರುಗಳು ಹಾಗೂ ಚಿಹ್ನೆಗಳಿರುವ ರಾಜಕೀಯ ಪಕ್ಷಗಳನ್ನು ನಿಷೇಧಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಬಿಜೆಪಿಯನ್ನೂ ಪ್ರತಿವಾದಿಯನ್ನಾಗಿಸಬೇಕೆಂದು ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ (ಐಯುಎಂಎಲ್)‌ ಸೋಮವಾರ ಸುಪ್ರೀಂ ಕೋರ್ಟಿಗೆ ಮನವಿ ಮಾಡಿದೆ.

ಕಮಲವು ಧಾರ್ಮಿಕ ಚಿಹ್ನೆಯಾಗಿದೆ ಹಾಗೂ ಹಿಂದು ಮತ್ತು ಬೌದ್ಧ ಧರ್ಮಗಳಿಗೆ ಸಂಬಂಧಿಸಿದ್ದಾಗಿದೆ ಎಂದು ಹಿರಿಯ ವಕೀಲ ದುಷ್ಯಂತ್‌ ದವೆ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ಮುಸ್ಲಿಂ ಲೀಗ್‌ ಹೇಳಿದೆ. ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಂ ಆರ್‌ ಶಾ ಹಾಗೂ ಸಿ ಟಿ ರವಿಕುಮಾರ್‌ ಅವರ ಪೀಠ ನಡೆಸುತ್ತಿದೆ.

ಬಿಜೆಪಿ ಹೊರತಾಗಿ ಶಿವಸೇನೆ, ಶಿರೋಮಣಿ ಅಕಾಲಿ ದಳ, ಹಿಂದು ಸೇನಾ, ಹಿಂದು ಮಹಾಸಭಾ, ಕ್ರಿಶ್ಚಿಯನ್‌ ಡೆಮಾಕ್ರೆಟಿಕ್‌ ಫ್ರಂಟ್‌, ಇಸ್ಲಾಮ್‌ ಪಾರ್ಟಿ ಹಿಂದ್‌ ಮುಂತಾದ 26 ಪಕ್ಷಗಳನ್ನು ಪ್ರತಿವಾದಿಗಳನ್ನಾಗಿಸಬೇಕೆಂದು ಮುಸ್ಲಿಂ ಲೀಗ್‌ ಕೋರಿದೆ.

ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು  ಈಗ ಹಿಂದು ಧರ್ಮಕ್ಕೆ ಮತಾಂತರಗೊಂಡು ಜಿತೇಂದ್ರ ನಾರಾಯಣ್‌ ಸಿಂಗ್‌ ತ್ಯಾಗಿ ಆಗಿರುವ ಉತ್ತರ ಪ್ರದೇಶದ ಶಿಯಾ ವಕ್ಫ್‌ ಮಂಡಳಿಯ ಮಾಜಿ ಅಧ್ಯಕ್ಷ ಸಯೀದ್‌ ವಸೀಂ ರಿಝ್ವಿ ಸಲ್ಲಿಸಿದ್ದಾರೆ. ಸದ್ಯ ಅರ್ಜಿಗೆ ಐಯುಎಂಎಲ್‌ ಮತ್ತು ಎಐಎಂಐಎಂ ಅನ್ನು ಪ್ರತಿವಾದಿಗಳನ್ನಾಗಿಸಲಾಗಿದೆ.

ಎಐಎಂಐಎಂ ಪರ ಹಾಜರಿದ್ದ ಹಿರಿಯ ವಕೀಲ ಹಾಗೂ ಮಾಜಿ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಮಾತನಾಡಿ, ಅರ್ಜಿದಾರನ ಯಾವುದೇ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗದೇ ಇರುವುದರಿಂದ ಈ ಅರ್ಜಿಯು ಸಂವಿಧಾನದ 32ನೇ ವಿಧಿಯನದ್ವಯ ಸರಿಯಲ್ಲ ಎಂದು ಹೇಳಿದ್ದಾರೆ.

Similar News