ಬಿಜೆಪಿ ಸಾಮರ್ಥ್ಯ ಅರ್ಥ ಮಾಡಿಕೊಳ್ಳದಿದ್ದರೆ ಸೋಲಿಸಲು ಸಾಧ್ಯವಿಲ್ಲ: ಪ್ರಶಾಂತ್ ಕಿಶೋರ್

Update: 2023-03-20 17:05 GMT

ಹೊಸದಿಲ್ಲಿ, ಮಾ. 20: ಬಿಜೆಪಿಯ ವಿರುದ್ಧದ ಪ್ರತಿಪಕ್ಷಗಳ ಒಗ್ಗಟ್ಟು ಅಸ್ಥಿರ ಹಾಗೂ ಸೈದ್ಧಾಂತಿಕವಾಗಿ ಭಿನ್ನವಾಗಿರುವುದರಿಂದ 2024ರ ಚುನಾವಣೆಯಲ್ಲಿ ಅದು ಎಂದಿಗೂ ಕೆಲಸ ಮಾಡುವುದಿಲ್ಲ ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಸೋಮವಾರ ಭವಿಷ್ಯ ನುಡಿದಿದ್ದಾರೆ. ರಾಹುಲ್ ಗಾಂಧಿ ಅವರ ಭಾರತ್ ಜೋಡೊ ಯಾತ್ರೆಯ ಪ್ರಯೋಜನವೇನು ಎಂದು ಪ್ರಶಾಂತ್ ಕಿಶೋರ್ ಅವರು ಪ್ರಶ್ನಿಸಿದ್ದಾರೆ. 

‘‘ಬಿಜೆಪಿಯನ್ನು ಎದುರಿಸಲು ಬಯಸುವುದಾದರೆ ನೀವು ಹಿಂದುತ್ವ, ರಾಷ್ಟ್ರೀಯತೆ, ಕಲ್ಯಾಣವಾದ ಮೊದಲಾದ ಅದರ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳಬೇಕು.ಅದು ಮೂರು ಹಂತದ ಸ್ತಂಭ. ಇದರಲ್ಲಿ ಕನಿಷ್ಠ ಎರಡನ್ನಾದರೂ ನಿಮಗೆ ಉರುಳಿಸಲು ಸಾಧ್ಯವಾಗದೇ ಇದ್ದರೆ, ಬಿಜೆಪಿಯನ್ನು ಎದುರಿಸಲು ಸಾಧ್ಯವಾಗುವುದಿಲ್ಲ’’ ಎಂದು ಪ್ರಶಾಂತ್ ಕಿಶೋರ್ ತಿಳಿಸಿದ್ದಾರೆ.

ಹಿಂದುತ್ವದ ಸಿದ್ಧಾಂತದ ವಿರುದ್ಧ ಹೋರಾಡಲು ಸಿದ್ಧಾಂತಗಳ ಮೈತ್ರಿಯಾಗಬೇಕು. ಗಾಂಧಿವಾದಿಗಳು, ಅಂಬೇಡ್ಕರ್‌ವಾದಿಗಳು, ಸಮಾಜವಾದಿಗಳು, ಕಮ್ಯೂನಿಷ್ಟರು ಸಂಘಟಿತರಾಗಬೇಕು. ಸಿದ್ಧಾಂತ ತುಂಬಾ ಮುಖ್ಯ. ಆದರೆ, ಈ ಸಿದ್ಧಾಂತದ ಆಧಾರದಲ್ಲಿ ಕುರುಡು ನಂಬಿಕೆ ಹೊಂದಿರಬಾರದು ಎಂದು ಅವರು ಹೇಳಿದರು. 
ಮಾಧ್ಯಮಗಳಲ್ಲಿರುವ ನೀವು ಪ್ರತಿಪಕ್ಷಗಳ ಮೈತ್ರಿಯನ್ನು ಪಕ್ಷಗಳು ಅಥವಾ ನಾಯಕರ ಒಗ್ಗೂಡುವಿಕೆ ಎಂದು ನೋಡುತ್ತೀರಿ. ಆದರೆ, ಯಾರು ಯಾರೊಂದಿಗೆ ಭೋಜನ ಸೇವಿಸುತ್ತಾರೆ, ಯಾರು ಚಹಾಕ್ಕೆ ಕರೆಯುತ್ತಾರೆ... ನಾನು ಅದನ್ನು ಸಿದ್ಧಾಂತದ ರಚನೆಯಲ್ಲಿ ನೋಡುತ್ತೇನೆ.  ಅಂತಹ ಸಮಯದ ವರೆಗೆ ಸೈದ್ಧಾಂತಿಕ ಹೊಂದಾಣಿಕೆ ನಡೆಯುವುದಿಲ್ಲ. ಆದುದರಿಂದ ಬಿಜೆಪಿಯನ್ನು ಸೋಲಿಸಲು ಯಾವುದೇ ಮಾರ್ಗವಲ್ಲ ಎಂದು ಅವರು ಹೇಳಿದರು. 

ಮಹಾತ್ಮಾ ಗಾಂಧಿ ಅವರ ಸಿದ್ಧಾಂತವೇ ನನ್ನ ಸಿದ್ಧಾಂತ. ಬಿಹಾರ್ ‘‘ಜನ ಸೂರಜ್ ಯಾತ್ರೆ’’ ಗಾಂಧಿ ಕಾಂಗ್ರೆಸ್‌ನ ಸಿದ್ಧಾಂತದ ಪುನರುಜ್ಜೀವನ ಪ್ರಯತ್ನ ಎಂದು ಪ್ರಶಾಂತ್ ಕಿಶೋರ್ ಹೇಳಿದರು.

Similar News