ದಿಲ್ಲಿಯ ರಾಮ್‌ಲೀಲಾ ಮೈದಾನದಲ್ಲಿ ಜಮಾಯಿಸಿದ ರೈತರು: ‘‘ಲಿಖಿತ ಬದ್ಧತೆ’’ ಈಡೇರಿಸುವಂತೆ ಕೇಂದ್ರಕ್ಕೆ ಆಗ್ರಹ

Update: 2023-03-20 17:39 GMT

ಹೊಸದಿಲ್ಲಿ, ಮಾ. 20: 2021 ಡಿಸೆಂಬರ್‌ನಲ್ಲಿ ಸರಕಾರ ತಮಗೆ ನೀಡಿದ ‘‘ಲಿಖಿತ ಬದ್ಧತೆ’’ಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿವಿಧ ಬಣ್ಣಗಳು ಹಾಗೂ ಶೈಲಿಗಳ ಪೇಟಗಳನ್ನು ಧರಿಸಿದ ಸಾವಿರಾರು ರೈತರು ಸಂಸತ್ತಿನಿಂದ ಕೇವಲ 5 ಕಿ.ಮೀ. ದೂರದಲ್ಲಿರುವ ರಾಮಲೀಲಾ ಮೈದಾನದಲ್ಲಿ ಸೋಮವಾರ ಜಮಾಯಿಸಿದರು.  

ಕೃಷಿ ಕಾಯ್ದೆಯನ್ನು ಹಿಂಪಡೆಯುವಂತೆ ಸರಕಾರವನ್ನು ಆಗ್ರಹಿಸಿ ಸುಮಾರು ಒಂದು ವರ್ಷಗಳ ಕಾಲ ನಡೆದ ಚಳುವಳಿಯ ನೇತೃತ್ವ ವಹಿಸಿದ್ದ ರೈತ ಒಕ್ಕೂಟಗಳ ಸಮೂಹ ಸಂಯುಕ್ತ ಕಿಸಾನ್ ಮೋರ್ಚಾದ ಬ್ಯಾನರ್ ಅಡಿಯಲ್ಲಿ ರೈತರು ಇಲ್ಲಿ ಸೇರಿದರು. 

ಕನಿಷ್ಠ ಬೆಂಬಲ ಬೆಲೆ ಕುರಿತು ಕಾನೂನಾತ್ಮಕ ಖಾತರಿ ನೀಡುವುದು,  ರೈತರ ವಿರುದ್ಧ ದಾಖಲಿಸಲಾದ ಪ್ರಕರಣಗಳನ್ನು ಹಿಂಪಡೆಯುವುದು, ಪ್ರತಿಭಟನೆ ಸಂದರ್ಭ ಮೃತಪಟ್ಟ ರೈತರ ಕುಟುಂಬಳಿಗೆ ಪರಿಹಾರ ನೀಡುವುದು, ಸಾಲ ಮನ್ನಾ ಮಾಡುವುದು, ಪಿಂಚಣಿ ನೀಡುವುದು ಹಾಗೂ ವಿದ್ಯುತ್ ಮಸೂದೆಯನ್ನು ಹಿಂಪಡೆಯುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ರೈತರು ಆಗ್ರಹಿಸಿದರು.  
ಲಿಖಿತ ಬದ್ಧತೆಯ ಹೊರತಾಗಿಯೂ ಕೇಂದ್ರ ಸರಕಾರ ರೈತರ ಬೇಡಿಕೆ ಈಡೇರಿಸಲು ವಿಫಲವಾಗಿದೆ ಎಂದು ಜೈ ಕಿಸಾನ್ ಆಂದೋಲನ್‌ನ ರಾಷ್ಟ್ರಾಧ್ಯಕ್ಷ ಅವಿಕ್ ಶಾ ಹೇಳಿದ್ದಾರೆ. 

‘‘ರೈತರ ವಿರುದ್ಧದ ಸಾವಿರಾರು ಪ್ರಕರಣಗಳು ಬಾಕಿ ಉಳಿದಿವೆ. ಪ್ರತಿಭಟನೆ ಸಂದರ್ಭ ಸುಮಾರು 750ಕ್ಕೂ ಅಧಿಕ ರೈತರು ತಮ್ಮ ಜೀವ ಕಳೆದುಕೊಂಡಿದ್ದಾರೆ. ಅವರ ಕುಟುಂಬಗಳಿಗೆ ಪರಿಹಾರ ನೀಡಿಲ್ಲ. ಅಲ್ಲದೆ, ನಮ್ಮ ಇತರ ಹಲವು ಬೇಡಿಕೆಗಳನ್ನು ಕೂಡ ಈಡೇರಿಸಿಲ್ಲ’’ ಎಂದು ಅವರು ಹೇಳಿದ್ದಾರೆ. 
‘‘ದೇಶಾದ್ಯಂತ ರೈತರು ದಯನೀಯ ಸ್ಥಿತಿಯಲ್ಲಿದ್ದಾರೆ’’ ಎಂದು ಬಿಹಾರದ ವೈಶಾಲಿ ಜಿಲ್ಲೆಯಿಂದ ದಿಲ್ಲಿಗೆ ತಲುಪಿದ ರೈತರ ಗುಂಪಿನ ಭಾಗವಾಗಿರುವ ಮಜಿಂದರ್ ಶಾ ಹೇಳಿದ್ದಾರೆ. 

Similar News