ಬಜೆಟ್ ಮಂಡನೆಗೆ ಅವಕಾಶ ಕೊಡಿ, ದಿಲ್ಲಿ ಜನತೆ ಬಗ್ಗೆ ನಿಮಗೆ ಯಾಕೆ ಕೋಪ?: ಪ್ರಧಾನಿಗೆ ಅರವಿಂದ ಕೇಜ್ರಿವಾಲ್ ಪತ್ರ

Update: 2023-03-21 07:42 GMT

 ಹೊಸದಿಲ್ಲಿ: ದಯವಿಟ್ಟು ದಿಲ್ಲಿ ಬಜೆಟ್ ಮಂಡಿಸದಂತೆ ತಡೆಯಬೇಡಿ ಎಂದು ದಿಲ್ಲಿ ಮುಖ್ಯಮಂತ್ರಿ  ಅರವಿಂದ ಕೇಜ್ರಿವಾಲ್ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

"ದೇಶದ 75 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಬಜೆಟ್ ಮಂಡಿಸದಂತೆ ತಡೆಯಲಾಗಿದೆ. ದಿಲ್ಲಿ ಜನರ ಮೇಲೆ ನೀವು ಏಕೆ ಕೋಪಗೊಂಡಿದ್ದೀರಿ?" ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

"ದಿಲ್ಲಿಯ ಜನರು ತಮ್ಮ ಬಜೆಟ್ ಅನ್ನು ಅಂಗೀಕರಿಸಲು ಕೈ ಜೋಡಿಸಿ ನಿಮ್ಮನ್ನು ಒತ್ತಾಯಿಸುತ್ತಾರೆ" ಎಂದು ಕೇಜ್ರಿವಾಲ್  ಹೇಳಿದರು.

ದಿಲ್ಲಿ  ವಿಧಾನಸಭೆಯಲ್ಲಿ ಇಂದು ಬಜೆಟ್ ಅನ್ನು ಮಂಡಿಸಬೇಕಿತ್ತು, ಆದರೆ ಬಜೆಟ್ ಮಂಡಿಸುವುದನ್ನು ಕೇಂದ್ರವು ನಿರ್ಬಂಧಿಸಿದೆ ಎಂದಿರುವ  ಕೇಜ್ರಿವಾಲ್ , ಇದನ್ನು ಗೂಂಡಾಗಿರಿ" ಎಂದು ಕರೆದರು.

ದಿಲ್ಲಿಯಲ್ಲಿ ಕೇಂದ್ರವನ್ನು ಪ್ರತಿನಿಧಿಸುವ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಕಳವಳಗಳನ್ನು ವ್ಯಕ್ತಪಡಿಸಿದ ನಂತರ ಕೇಂದ್ರ ಸರಕಾರವು ಆಮ್ ಆದ್ಮಿ ಪಕ್ಷ (ಎಎಪಿ) ಸರಕಾರಕ್ಕೆ  ಬಜೆಟ್ ಅನ್ನು ಮರುಪರಿಶೀಲಿಸುವಂತೆ ಕೇಳಿಕೊಂಡಿದೆ.

ಜಾಹೀರಾತುಗಳಿಗೆ ಹೆಚ್ಚಿನ ಅನುದಾನ ಹಾಗೂ ಮೂಲಸೌಕರ್ಯ ಮತ್ತು ಇತರ ಅಭಿವೃದ್ಧಿ ಉಪಕ್ರಮಗಳಿಗೆ ನಿಗದಿಪಡಿಸಿದ ತುಲನಾತ್ಮಕವಾಗಿ ಕಡಿಮೆ ಹಣ ಹಂಚಿಕೆಯ ಬಗ್ಗೆ ವಿವರಿಸುವಂತೆ ಎಎಪಿ ಸರಕಾರವನ್ನು  ಕೇಳಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.

Similar News