ಬಂಟರನ್ನು ಪ್ರವರ್ಗ2(ಎ)ಗೆ ಸೇರ್ಪಡೆಗೊಳಿಸಲು ಬಂಟರ ಯಾನೆ ನಾಡವರ ಮಾತೃಸಂಘ ಒತ್ತಾಯ

Update: 2023-03-21 10:09 GMT

ಮಂಗಳೂರು, ಮಾ.21: "ಬಂಟರು ಯಾನೆ ನಾಡವರನ್ನು ಪ್ರವರ್ಗ 3(ಬಿ)ಯಿಂದ ಕೈಬಿಟ್ಟು 2(ಎ)ಗೆ ಸೇರಿಸಬೇಕು, ಬಂಟರ ನಾಡವರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬಂಟರ ಯಾನೆ ನಾಡವರ ಸಮಾಜ ಅಧ್ಯಯನ ಕೇಂದ್ರವನ್ನು ಸ್ಥಾಪಿಸಬೇಕು. ಈ ಕುರಿತು ರಾಜ್ಯ ಸರಕಾರ ಕೂಡಲೇ ಕಾರ್ಯಪ್ರವೃತ್ತ ರಾಗಿ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮುನ್ನ ಬಂಟರ ಸಮಾಜಕ್ಕೆ ನ್ಯಾಯ ಒದಗಿಸಬೇಕು" ಎಂದು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಒತ್ತಾಯಿಸಿದ್ದಾರೆ.

ನಗರದ ಬಂಟರ ಯಾನೆ ನಾಡವರ ಮಾತೃ ಸಂಘದ ಸಭಾಂಗಣದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿ ಮಾತಾಡಿದ ಅವರು, "ಬಂಟ ಸಮಾಜದಲ್ಲಿ 40 ಶೇ. ಜನರು ಬಡತನ ರೇಖೆಗಿಂತ ಕೆಳಗಿದ್ದು, ಕಷ್ಟ-ಕಾರ್ಪಣ್ಯಗಳೊಂದಿಗೆ ನಿತ್ಯ ದುಃಖದ ಜೀವನ ನಡೆಸುತ್ತಿದ್ದಾರೆ. ಈ ಬಗ್ಗೆ ನಾವು ಹಲವು ಬಾರಿ ಮನವಿ ಮಾಡಿದ್ದರೂ ಈ ಹಿಂದಿನಿಂದ ಆಡಳಿತದಲ್ಲಿದ್ದ ಯಾವುದೇ ಸರಕಾರಗಳು ಈ ನಿಟ್ಟಿನಲ್ಲಿ ಗಮನ ಕೊಡಲಿಲ್ಲ. ನಮ್ಮ ಬಗ್ಗೆ ತಾರತಮ್ಯ ಧೋರಣೆಯನ್ನು ಅನುಸರಿಸಿದ ಕಾರಣ ವಿದ್ಯೆ, ಉದ್ಯೋಗ, ರಾಜಕೀಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಬಂಟ ಸಮಾಜ ಬಾಂಧವರು ಅವಕಾಶ ವಂಚಿತರಾಗುವಂತಾಗಿದೆ ಎಂದು ಹೇಳಿದರು.

ದೇಶದ, ರಾಜ್ಯದ ಹಾಗೂ ಜಿಲ್ಲೆಗಳ ಅಭಿವೃದ್ಧಿಯಲ್ಲಿ ಬಂಟರ ಪಾತ್ರವು ಗಮನಾರ್ಹವಾಗಿದೆ. ಚಾರಿತ್ರಿಕ ಕಾಲದಿಂದಲೂ ಊರಿನ ದೇವಸ್ಥಾನ, ದೈವಸ್ಥಾನ, ಆರಾಧನಾ ಸ್ಥಳಗಳು, ಶಾಲೆಗಳ ನಿರ್ಮಾಣ, ಪುನಃ ನಿರ್ಮಾಣದಲ್ಲಿ ಬಂಟ ಬಾಂಧವರು ಮುಂಚೂಣಿಯಲ್ಲಿರುವ ವಿಷಯ ಎಲ್ಲರಿಗೂ ತಿಳಿದಿರುತ್ತದೆ. ಹಣ ಇಲ್ಲದವರು ಈ ಎಲ್ಲಾ ಕಾರ್ಯಗಳಲ್ಲಿ ದೈಹಿಕವಾಗಿ ದುಡಿದು ಸೇವೆ ಸಲ್ಲಿಸುತ್ತಿದ್ದಾರೆ. ಎಲ್ಲರೊಟ್ಟಿಗೆ ಎಲ್ಲರಿಗಾಗಿ ಜೀವಿಸುವ ಒಂದು ಜನಾಂಗವನ್ನು ಕಡೆಗಣಿಸಿದರೆ ಅದರಿಂದ ನಮ್ಮ ಇಡೀ ಸಾಮಾಜಿಕ ವ್ಯವಸ್ಥೆಯಲ್ಲಿ ಮತ್ತು ಇತರ ವಿಷಯದಲ್ಲಿ ದುಷ್ಪರಿಣಾಮಗಳು ಉಂಟಾಗುತ್ತವೆ. ಇದಕ್ಕೆ ಅವಕಾಶ ನೀಡದಂತೆ ಎಲ್ಲಾ ರಾಜಕೀಯ ಪಕ್ಷಗಳೊಡನೆ ಕೇಳಿಕೊಂಡಿದ್ದೇವೆ. ಆದರೆ ಯಾವುದೇ ರೀತಿಯಲ್ಲಿ ನ್ಯಾಯ ಸಿಕ್ಕಿಲ್ಲ" ಎಂದರು.

"1908ನೇ ಇಸವಿಯಲ್ಲಿ ಬಂಟರ ಯಾನೆ ನಾಡವರ ಮಾತೃಸಂಘವನ್ನು ಸ್ಥಾಪಿಸಿ ಹೆಚ್ಚಿನ ತಾಲೂಕುಗಳಲ್ಲಿ ಭೂಮಿಯನ್ನು ಖರೀದಿಸಿ ವಿದ್ಯಾರ್ಥಿ ನಿಲಯಗಳನ್ನು ನಿರ್ಮಾಣ ಮಾಡಿ ವಿದ್ಯಾರ್ಥಿ ನಿಧಿಯನ್ನು ಸ್ಥಾಪಿಸುವುದರೊಂದಿಗೆ ಈ ವಿದ್ಯಾರ್ಥಿನಿಲಯಗಳಲ್ಲಿ ಎಲ್ಲಾ ಜಾತಿ ಮತದ ಯುವಜನರಿಗೆ ಇರಲು ಅವಕಾಶ ಮಾಡಿಕೊಟ್ಟು ನಮ್ಮ ಜಿಲ್ಲೆಯ ಯುವಜನರು

ವಿದ್ಯಾರ್ಜನೆ ಮಾಡಲು ಬಂಟ ಸಮಾಜದ ಹಿರಿಯರು ಕಾರಣೀಕರ್ತರಾದರು. ಹೀಗಿರುವಾಗ ಬಂಟ ಸಮಾಜಕ್ಕೆ ನಿಗಮ ಸಿಗದೇ ಇರುವುದು ಅನ್ಯಾಯವಾಗಿದೆ. ಬಂಟರು ಅನುವಂಶಿಕ ಮೊಸರು, ಆಡಳಿತದಾರರಾಗಿದ್ದ ಆದರೆ ಪ್ರಸಕ್ತ ಸರಕಾರದ ಅಧೀನದಲ್ಲಿರುವ ದೇವಸ್ಥಾನ, ದೈವಸ್ಥಾನ ಮತ್ತು ಇತರ ಆರಾಧನಾ ಕ್ಷೇತ್ರಗಳ ಆಡಳಿತವನ್ನು ಸಂಬಂದಪಟ್ಟವರಿಗೆ ವಾಪಸ್

ನೀಡಬೇಕು, ಎ.ಬಿ. ಶೆಟ್ಟಿ ವೃತ್ತವನ್ನು ಮೊದಲಿದ್ದ ಸ್ಥಳದಲ್ಲಿ ದೊಡ್ಡದಾಗಿ ಹಾಗೂ ಆಕರ್ಷಕವಾಗಿ ನಿರ್ಮಿಸಬೇಕು, ಬಿ.ಪಿ.ಎಲ್. ಕಾರ್ಡ್‌ದಾರರಿಗೆ ಮತ್ತು ಅವರ ಮಕ್ಕಳಿಗೆ ಉಚಿತ ಆರೋಗ್ಯ ಇನ್ನೂರೆನ್ಸ್ ನೀಡುವುದು. ಬಿ.ಪಿ.ಎಲ್. ಕಾರ್ಡ್‌ದಾರ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ, 30 ವರ್ಷ ದಾಟಿದ ಅವಿವಾಹಿತ ಹೆಣ್ಣುಮಕ್ಕಳಿಗೆ ಸಹಾಯಧನ ನೀಡುವುದು ಇನ್ನಿತರ ಮನವಿಗಳನ್ನು ಸರಕಾರದ ಮುಂದಿರಿಸಿದ್ದೇವೆ" ಎಂದು ಅಜಿತ್ ಕುಮಾರ್ ರೈ ಹೇಳಿದರು.

ಸುದ್ದಿಗೋಷ್ಠಿಯಲ್ಲಿ  ಜೊತೆ ಕಾರ್ಯದರ್ಶಿ ಸಂಪಿಗೇಡಿ ಸಂಜೀವ ಶೆಟ್ಟಿ, ಕೋಶಾಧಿಕಾರಿ  ಸಿ.ಎ.ರಾಮ ಮೋಹನ ರೈ ಹಾಗೂ ಬಂಟರ ಯಾನೆ ನಾಡವರ ಮಾತೃಸಂಘದ ಸದಸ್ಯರು ಉಪಸ್ಥಿತರಿದ್ದರು.

Similar News