ಸ್ಟಾರ್‌ಬಕ್ಸ್ ನೂತನ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ಭಾರತ ಮೂಲದ ಲಕ್ಷ್ಮಣ್ ನರಸಿಂಹನ್ ಯಾರು?

Update: 2023-03-21 13:16 GMT

ಹೊಸದಿಲ್ಲಿ: ಸ್ಟಾರ್‌ಬಕ್ಸ್‌ (Starbucks) ಸಂಸ್ಥೆಯ ನೂತನ ಸಿಇಒ ಆಗಿ ಭಾರತ ಮೂಲದ ಲಕ್ಷ್ಮಣ್‌ ನರಸಿಂಹನ್‌ (Laxman Narasimhan) ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹುದ್ದೆಯನ್ನು ಈ ಹಿಂದೆ ಕಂಪೆನಿಯ ಸ್ಥಾಪಕ ಹೌವಾರ್ಡ್‌ ಶುಲ್ಟ್ಝ್‌ ಹೊಂದಿದ್ದರು.

ಲಕ್ಷ್ಮಣ್‌ ನರಸಿಂಹನ್‌ ಅವರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

► ಲಕ್ಷ್ಮಣ್‌ ನರಸಿಂಹನ್‌ ಅವರು ಸ್ಟಾರ್‌ಬಕ್ಸ್‌ ಸಂಸ್ಥೆಯನ್ನು ಅಕ್ಟೋಬರ್‌ 1, 2022 ರಂದು ಸೇರಿದ್ದರು. ಜಾಗತಿಕ ಉದ್ಯಮಗಳು, ರೆಸ್ಟಾರೆಂಟ್‌ಗಳು, ಇ-ಕಾಮರ್ಸ್‌ ಸಂಸ್ಥೆಗಳು ಮತ್ತಿತರ ಸಂಸ್ಥೆಗಳನ್ನು ಮುನ್ನಡೆಸಿರುವ ಅವರಿಗೆ ಮೂರು ದಶಕಗಳ ಅನುಭವವಿದೆ.

► ಸ್ಟಾರ್‌ಬಕ್ಸ್‌ ಸೇರುವ ಮೊದಲು ಲಕ್ಷ್ಮಣ್‌ ನರಸಿಂಹನ್‌ ಅವರು ಬಹುರಾಷ್ಟ್ರೀಯ ಆರೋಗ್ಯ, ಹೈಜೀನ್‌ ಮತ್ತು ನ್ಯುಟ್ರಿಶನ್‌ ಕಂಪೆನಿಯಾಗಿರುವ ರೆಕಿಟ್ಟ್‌ ಇದರ ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು.

► ಲಕ್ಷ್ಮಣ್‌ ನರಸಿಂಹನ್‌ ಅವರು ಈ ಹಿಂದೆ ಪೆಪ್ಸಿಕೋ ಸಂಸ್ಥೆಯಲ್ಲೂ ಹಲವು ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಕಂಪೆನಿಯ ಜಾಗತಿಕ ಮುಖ್ಯ ವಾಣಿಜ್ಯ ಅಧಿಕಾರಿಯಾಗಿ,  ಪೆಪ್ಸಿಕೋದ ಲ್ಯಾಟಿನ್‌ ಅಮೆರಿಕಾ, ಯುರೋಪ್‌ ಮತ್ತು ಸಬ್-ಸಹಾರ ದೇಶಗಳ ಸಿಇಒ ಆಗಿ ಮತ್ತು ಪೆಪ್ಸಿಕೋ ಅಮೆರಿಕಾಸ್‌ ಫುಡ್ಸ್‌ ಇದರ ಸಿಎಫ್‌ಒ ಆಗಿ ಅವರು ಕಾರ್ಯನಿರ್ವಹಿಸಿದ್ದರು.

► ನರಸಿಂಹನ್‌ ಅವರು ಸುಮಾರು 19 ವರ್ಷಗಳ ಕಾಲ ಮೆಕ್‌ಕಿನ್ಸೆ & ಕಂಪೆನಿಯಲ್ಲೂ ಸೇವೆ ಸಲ್ಲಿಸಿದ್ದರು.

► ಪುಣೆ ವಿವಿಯಿಂದ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ಪದವಿ ಪಡೆದ ಅವರು ಜರ್ಮನ್‌ ಎಂಡ್‌ ಇಂಟರ್‌ನ್ಯಾಷನಲ್‌ ಸ್ಟಡೀಸ್‌ನಲ್ಲಿ ಯುನಿವರ್ಸಿಟಿ ಆಫ್‌ ಪೆನ್ನಿಸಿಲ್ವೇನಿಯಾದ ಲಾಡರ್‌ ಇನ್‌ಸ್ಟಿಟ್ಯೂಟ್‌ನಿಂದ ಎಂಎ ಪದವಿ ಪಡೆದಿದ್ದಾರೆ. ಅವರು ಯುನಿವರ್ಸಿಟಿ ಆಫ್‌ ಪೆನ್ನಿಸಿಲ್ವೇನಿಯಾ ಇದರ ದಿ ವಾರ್ಟನ್‌ ಸ್ಕೂಲ್‌ನಲ್ಲಿ ಫೈನಾನ್ಸ್‌ ವಿಷಯದಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.

► ಆರು ಭಾಷೆಗಳಲ್ಲಿ ಪಾರಂಗತ್ಯ ಹೊಂದಿರುವ ಲಕ್ಷ್ಮಣ್‌ ನರಸಿಂಹನ್‌ ಅವರು ಬ್ರೂಕಿಂಗ್ಸ್‌ ಸಂಸ್ಥೆಯ ಟ್ರಸ್ಟೀ ಆಗಿ, ವೆರಿಝಾನ್‌ ನಿರ್ದೇಶಕ ಮಂಡಳಿಯ ಸದಸ್ಯರಾಗಿ ಹಾಗೂ ಇಂಗ್ಲೆಂಡ್‌ ಪ್ರಧಾನಿಯ ಬಿಲ್ಡ್‌ ಬ್ಯಾಕ್‌ ಬೆಟರ್‌ ಕೌನ್ಸಿಲ್‌ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Similar News