ಎನ್ಐಎಯಿಂದ ಕಾಶ್ಮೀರಿ ಪತ್ರಕರ್ತ ಇರ್ಫಾನ್ ಮೆಹ್ರಾಜ್‌ ಬಂಧನ

Update: 2023-03-21 14:42 GMT

ಶ್ರೀನಗರ, ಮಾ. 21: ಭಯೋತ್ಪಾದನೆಗೆ ನಿಧಿ ಪೂರೈಸಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದದಲ್ಲಿ, ಕಾಶ್ಮೀರಿ ಪತ್ರಕರ್ತ ಇರ್ಫಾನ್ ಮೆಹ್ರಾಜ್ ರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯು ಸೋಮವಾರ ಬಂಧಿಸಿದೆ.

ಮೆಹ್ರಾಜ್, ೨೦೨೧ ನವೆಂಬರ್ನಲ್ಲಿ ಕಾನೂನುಬಾಹಿರ (ಚಟುವಟಿಕೆಗಳ) ತಡೆ ಕಾಯ್ದೆಯಡಿ ಬಂಧನಕ್ಕೊಳಗಾಗಿರುವ ಮಾನವಹಕ್ಕುಗಳ ಹೋರಾಟಗಾರ ಖುರ್ರಮ್ ಪರ್ವೇಝ್ರ ನಿಕಟ ಒಡನಾಡಿಯಾಗಿದ್ದಾರೆ ಎಂದು ಹೇಳಿಕೆಯೊಂದರಲ್ಲಿ ಎನ್ಐಎ ತಿಳಿಸಿದೆ. ಮೆಹ್ರಾಜ್ ಮತ್ತು ಪರ್ವೇಝ್ ಇಬ್ಬರೂ ಶ್ರೀನಗರದಲ್ಲಿರುವ ಲಾಭ ಉದ್ದೇಶವಿಲ್ಲದ ಸಂಘಟನೆ ಜಮ್ಮು ಕಾಶ್ಮೀರ ಕೋಯಲೀಶನ್ ಆಫ್ ಸಿವಿಲ್ ಸೊಸೈಟಿ (ಜೆಕೆಸಿಸಿಎಸ್)ಯೊಂದಿಗೆ ನಂಟು ಹೊಂದಿದ್ದಾರೆ ಎಂದು ಅದು ಹೇಳಿದೆ.

‘‘ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗಳಿಗೆ ಜೆಕೆಸಿಸಿಎಸ್ ನಿಧಿ ಪೂರೈಸುತ್ತಿತ್ತು ಹಾಗೂ ಮಾನವಹಕ್ಕುಗಳ ರಕ್ಷಣೆಯ ಸೋಗಿನಲ್ಲಿ ಅದು ಕಣಿವೆಯಲ್ಲಿ ಪ್ರತ್ಯೇಕತಾವಾದಿ ಚಳವಳಿಯನ್ನು ನಡೆಸುತ್ತಿತ್ತು’’ ಎಂದು ಎನ್ಐಎ ಆರೋಪಿಸಿದೆ. ‘‘ಭಯೋತ್ಪಾದನೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಕಣಿವೆಯಲ್ಲಿರುವ ಕೆಲವು ಸರಕಾರೇತರ ಸಂಘಟನೆಗಳು (ಎನ್ಜಿಒ), ಟ್ರಸ್ಟ್ಗಳು ಮತ್ತು ಸೊಸೈಟಿಗಳ ಶಾಮೀಲಾತಿಯ ಬಗ್ಗೆ ಈ ಪ್ರಕರಣದಲ್ಲಿ ತನಿಖೆ ನಡೆಸಲಾಗುತ್ತಿದೆ’’ ಎಂದು ಅದು ಹೇಳಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿರುವ ಕೆಲವು ಸರಕಾರೇತರ ಸಂಘಟನೆಗಳು ಪರೋಪಕಾರ ಮತ್ತು ಕಲ್ಯಾಣ ಚಟುವಟಿಕೆಗಳ ಸೋಗಿನಲ್ಲಿ ನಿಧಿಗಳನ್ನು ಸಂಗ್ರಹಿಸುತ್ತಿವೆ, ಆದರೆ ಅವುಗಳು ಲಷ್ಕರೆ ತಯ್ಯಬ ಮತ್ತು ಹಿಝ್ಬುಲ್ ಮುಜಾಹಿದೀನ್ ಮುಂತಾದ ಭಯೋತ್ಪಾದಕ ಸಂಘಟನೆಗಳ ಜೊತೆ ನಂಟು ಹೊಂದಿವೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಆರೋಪಿಸಿದೆ.

ಪ್ರಕರಣ ೨೦೨೦ ಅಕ್ಟೋಬರ್ನಲ್ಲಿ ದಾಖಲಾಗಿದ್ದು, ಬಂಧನಕ್ಕೊಳಗಾಗಿರುವ ಮೊದಲ ವ್ಯಕ್ತಿ ಮೆಹ್ರಾಜ್ ಆಗಿದ್ದಾರೆ. ಅವರನ್ನು ದಿಲ್ಲಿಗೆ ಕರೆದುಕೊಂಡು ಹೋಗಲಾಗಿದೆ ಎನ್ನಲಾಗಿದೆ.

ಮೆಹ್ರಾಜ್ ‘ವಂದೇ ಮ್ಯಾಗಝಿನ್’ನ ಸ್ಥಾಪಕ ಸಂಪಾದಕರಾಗಿದ್ದಾರೆ. ಅವರು ಈಗ TwoCircles.net ನ ಹಿರಿಯ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ದ ಇಂಡಿಯನ್ ಎಕ್ಸ್ಪ್ರೆಸ್, ಅಲ್ ಜಝೀರ, ಹಿಮಾಲ್ ಸೌತ್ಏಶ್ಯನ್, ಡಿಡಬ್ಲ್ಯು ಮತ್ತು ಟಿಆರ್ಟಿ ವರ್ಲ್ಡ್ ಮುಂತಾದ ಮಾಧ್ಯಮಗಳಿಗೆ ಲೆಖನಗಳನ್ನು ಬರೆಯುತ್ತಾರೆ ಹಾಗೂ ಕಾರ್ಯಕ್ರಮಗಳನ್ನು ನೀಡುತ್ತಾರೆ.

‘ಪತ್ರಕರ್ತರ ಬಂಧನ, ವಂಚಕರಿಗೆ ಮುಕ್ತ ಅವಕಾಶ’

ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಮುಖ್ಯಸ್ಥ ಮೆಹಬೂಬಾ ಮುಫ್ತಿ, ಮೆಹ್ರಾಜ್ ರ ಬಂಧನವನ್ನು ಖಂಡಿಸಿದ್ದಾರೆ. ‘‘ಸತ್ಯವನ್ನು ಹೇಳಿರುವುದಕ್ಕಾಗಿ ಮೆಹ್ರಾಜ್ ರಂಥ ಪತ್ರಕರ್ತರನ್ನು ಬಂಧಿಸಲಾಗುತ್ತಿದೆ, ಆದರೆ ವಂಚಕರಿಗೆ ಕಾಶ್ಮೀರದಲ್ಲಿ ಮುಕ್ತ ಅವಕಾಶವನ್ನು ನೀಡಲಾಗುತ್ತಿದೆ’’ ಎಂದು ಅವರು ಹೇಳಿದ್ದಾರೆ.

ಗುಜರಾತ್ ನಿವಾಸಿಯಾಗಿರುವ ಕಿರಣ್ ಭಾಯಿ ಪಟೇಲ್, ತಾನು ಪ್ರಧಾನಿ ಕಚೇರಿಯ ಹಿರಿಯ ಅಧಿಕಾರಿ ಎಂದು ಹೇಳಿಕೊಂಡು ಝಡ್ ಪ್ಲಸ್ ಭದ್ರತೆಯೊಂದಿಗೆ ಕಾಶ್ಮೀರದಾದ್ಯಂತ ತಿರುಗಾಡಿರುವ ಘಟನೆಯನ್ನು ಮುಫ್ತಿ ಪ್ರಸ್ತಾಪಿಸಿದ್ದಾರೆ. ಅತಿ ಭದ್ರತೆಯ ವಲಯಗಳಿಗೆ ಪ್ರವೇಶಿಸಲು ವಂಚಕ ಕಿರಣ್ ಪಟೇಲ್ಗೆ ಅವಕಾಶ ನೀಡಲಾಗಿತ್ತು. ಆತನನ್ನು ಮಾರ್ಚ್ ೩ರಂದು ಬಂಧಿಸಲಾಗಿದೆ.

‘‘ಯುಎಪಿಎಯಂಥ ಕಠೋರ ಕಾನೂನುಗಳನ್ನು ನಿರಂತರವಾಗಿ ದುರುಪಯೋಗಪಡಿಸಲಾಗುತ್ತಿದೆ. ಕಾನೂನಿನ ಪ್ರಕ್ರಿಯೆಯೇ ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಗುತ್ತಿದೆ’’ ಎಂಬುದಾಗಿ ಮುಫ್ತಿ ಮಂಗಳವಾರ ಹೇಳಿದ್ದಾರೆ.

Similar News