ದೇಶದಲ್ಲಿ ಭಯೋತ್ಪಾದಕ ದಾಳಿ ಸಾಧ್ಯತೆಯನ್ನು ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ: ಸೇನಾ ವರಿಷ್ಠ ಮನೋಜ್ ಪಾಂಡೆ

Update: 2023-03-21 14:46 GMT

ಗುರುಗ್ರಾಮ, ಮಾ.21:  ಭವಿಷ್ಯದಲ್ಲಿಯೂ ಭಾರತವು ಭಯೋತ್ಪಾದನೆ ಹಾಗೂ ಆಂತರಿಕ ಭದ್ರತೆ ಕುರಿತ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಮತ್ತು ಅವುಗಳನ್ನು ದೇಶದ ಭದ್ರತಾ ಪಡೆಗಳು ಏಕತೆಯೊಂದಿಗೆ ನಿಭಾಯಿಸಲಿವೆಂದು ಎಂದು ಭೂ ಸೇನಾ ವರಿಷ್ಠ ಜನರಲ್ ಮನೋಜ್ ಪಾಂಡೆ ತಿಳಿಸಿದ್ದಾರೆ.

ಗುರುಗ್ರಾಮದ ಮಾನೆಸರ್ನಲ್ಲಿರುವ ರಾಷ್ಟ್ರೀಯ ಭದ್ರತಾ ದಳ (ಎನ್ಎಸ್ಜಿ)ದ  ನೆಲೆಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಪೊಲೀಸ್ ಕಮಾಂಡೊ ಸ್ಪರ್ಧೆಯನ್ನು   ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಆಧುನಿಕ ಯುಗದ ತಂತ್ರಜ್ಞಾನವು ಶತ್ರುವು ಡ್ರೋನ್, ಇಂಟರ್ನೆಟ್, ಸೈಬರ್ ಹಾಗೂ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು  ತನ್ನ ಚಟುವಟಿಕೆಗನ್ನು  ನಡೆಸುವುದಕ್ಕೆ  ಅವಕಾಶ ಮಾಡಿಕೊಟ್ಟಿದೆ ಎಂದವರು  ಹೇಳಿದರು.

‘‘ಭಯೋತ್ಪಾದನೆ ಹಾಗೂ ಆಂತರಿಕ ಭದ್ರತಾ ಪರಿಸ್ಥಿತಿಯು ನಮ್ಮ ದೇಶದ ಮೇಲೆ ವಿವಿಧ ರೂಪದಲ್ಲಿ ಪರಿಣಾಮವನ್ನು ಬೀರುತ್ತದೆ.  ಈ ಸವಾಲುಗಳನ್ನು ನಾವು ಏಕತೆಯೊಂದಿಗೆ ಎದುರಿಸುತ್ತಿದ್ದೇವೆ. ಇದರಿಂದಾಗಿ ವಿವಿಧ ರಾಜ್ಯಗಳಲ್ಲಿ ಭದ್ರತಾ ಪರಿಸ್ಥಿತಿಯ ಸುಧಾರಣೆಯಾಗುತ್ತದೆ. ಭವಿಷ್ಯದಲ್ಲಿಯೂ ಈ ಸವಾಲುಗಳು ಮುಂದುವರಿಯಲಿವೆ. ದೀರ್ಘ ಸಮಯದಿಂದಲೂ ಈ ಸವಾಲುಗಳು ನಮ್ಮ ಮುಂದಿದ್ದು, ಅವುಗಳಲ್ಲಿ ಕೆಲವು ಪರೋಕ್ಷವಾಗಿ ಹಾಗೂ ಇನ್ನು ಕೆಲವು ಗುಪ್ತವಾಗಿ ನಮಗೆ ಎದುರಾಗುತ್ತಿವೆ ಎಂದು ಮನೋಜ್ ಪಾಂಡೆ ತಿಳಿಸಿದರು.

ದೇಶದಲ್ಲಿ ಭಯೋತ್ಪಾದಕ ದಾಳಿ ನಡೆಯುವ  ಸಾಧ್ಯತೆಯನ್ನು  ನಿರ್ಲಕ್ಷಿಸುವ ಹಾಗಿಲ್ಲವೆಂದು ಹೇಳಿದ ಜ.ಪಾಂಡೆ, ಇಂತಹ ಹಲವು ಸಂಚುಗಳನ್ನು ವಿಫಲಗೊಳಿಸಿರುವುದಕ್ಕಾಗಿ  ಹಾಗೂ ಜಾಲಗಳನ್ನು ಮಟ್ಟಹಾಕಿರುವುದಕ್ಕಾಗಿ  ಭದ್ರತಾಪಡೆಗಳು ಹಾಗೂ ಬೇಹುಗಾರಿಕಾ ಸಂಸ್ಥೆಗಳನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು.

ಬಾಂಬ್ ಪತ್ತೆ ಹಾಗೂ ವಿಲೇವಾರಿ, ಹೊಂಚುದಾಳಿ,ಶತ್ರು ಡ್ರೋನ್ಗಳನ್ನು ಮಟ್ಟಹಾಕಲು  ವಿಶೇಷ ನೈಪುಣ್ಯತೆಯನ್ನು  ಅಭಿವೃದ್ಧಿಪಡಿಸಿರುವುದಕ್ಕಾಗಿ ಹಾಗೂ ಇತರ ಭದ್ರತಾಪಡೆಗಳ ಜೊತೆ ಸಮನ್ವಯದೊಂದಿಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕಾಗಿ ಅವರು ಎನ್ಎಸ್ಜಿಯನ್ನು ಅಭಿನಂದಿಸಿದರು.

ಮಾರ್ಚ್ 31ರವರೆಗೆ ನಡೆಯಲಿರುವ  ಅಖಿಲ ಭಾರತ ಕಮಾಂಡೊ ಪೊಲೀಸ್ ಸ್ಪರ್ಧೆಯಲ್ಲಿ ಕೇಂದ್ರ  ಸಶಸ್ತ್ರ ಪೊಲೀಸ್ ಪಡೆಗಳು ಹಾಗೂ ರಾಜ್ಯ ಪೊಲೀಸ್ ಸಂಘಟನೆಗಳಿಗೆ  ಸೇರಿದ ಒಟ್ಟು 24 ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ.

Similar News