ಟೆಕ್ ಕ್ಷೇತ್ರದಲ್ಲಿ ಹೆಚ್ಚಿದ ಕಾರ್ಮೋಡ: ಅಮೆಝಾನ್ ನಿಂದ ಇನ್ನೂ 9,000 ಉದ್ಯೋಗಿಗಳ ವಜಾ

ಈ ವರ್ಷ 1.5 ಲಕ್ಷ ಉದ್ಯೋಗಿಗಳನ್ನು ಕೈಬಿಟ್ಟ 500ಕ್ಕೂ ಅಧಿಕ ಕಂಪನಿಗಳು

Update: 2023-03-21 17:03 GMT

ಹೊಸದಿಲ್ಲಿ: ಕಳೆದ ಜನವರಿಯಲ್ಲಿ ತನ್ನ 18,000 ಉದ್ಯೋಗಿಗಳನ್ನು ವಜಾಗೊಳಿಸಿದ್ದ ಅಮೆಝಾನ್ ಸೋಮವಾರ ಇನ್ನೂ 9,000 ಉದ್ಯೋಗಿಗಳ ವಿರುದ್ಧ ಗದಾಪ್ರಹಾರ ನಡೆಸಿದ್ದು,ಇದರೊಂದಿಗೆ ಟೆಕ್ ಕ್ಷೇತ್ರದಲ್ಲಿ ಕಾರ್ಮೋಡಗಳು ಇನ್ನಷ್ಟು ದಟ್ಟಗೊಂಡಿವೆ. ಈ ವರ್ಷ ಈವರೆಗೆ 500ಕ್ಕೂ ಅಧಿಕ ಕಂಪನಿಗಳು ತಮ್ಮ ಸುಮಾರು 1.5 ಲಕ್ಷ ಉದ್ಯೋಗಿಗಳಿಗೆ ಗೇಟ್ಪಾಸ್ ನೀಡಿವೆ.

ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಕಡಿತಗಳ ಮೇಲೆ ನಿಗಾಯಿರಿಸುವ layoff.fyi ತಿಳಿಸಿರುವಂತೆ ಈ ವರ್ಷದಲ್ಲಿ ಈವರೆಗೆ 503 ಟೆಕ್ ಕಂಪನಿಗಳು 1,48,165 ಉದ್ಯೋಗಿಗಳನ್ನು ವಜಾಗೊಳಿಸಿವೆ.

ಟೆಕ್ ಕಂಪನಿಗಳು ಮತ್ತು ಸ್ಟಾರ್ಟ್ಅಪ್ಗಳಿಗೆ ನಿರಾಶಾದಾಯಕ ವರ್ಷವಾಗಿದ್ದ 2022ರಲ್ಲಿ ಸುಮಾರು 1,046 ಕಂಪನಿಗಳ ಕನಿಷ್ಠ 1.6 ಲ.ಉದ್ಯೋಗಿಗಳು ವಜಾಗೊಂಡಿದ್ದರು. 2023ನೇ ಸಾಲಿನ ಆರಂಭ ಇದಕ್ಕಿಂತ ಭಿನ್ನವಾಗಿಲ್ಲ.

ಜನವರಿ ತಿಂಗಳೊಂದರಲ್ಲೇ ಜಾಗತಿಕವಾಗಿ ಸುಮಾರು ಒಂದು ಲಕ್ಷ ಟೆಕ್ಕಿಗಳು ಉದ್ಯೋಗಗಳನ್ನು ಕಳೆದುಕೊಂಡಿದ್ದು, ಇವುಗಳಲ್ಲಿ ಅಮೆಝಾನ್, ಮೈಕ್ರೋಸಾಫ್ಟ್, ಗೂಗಲ್, ಸೇಲ್ಸ್ಫೋರ್ಸ್ನಂತಹ ಕಂಪನಿಗಳು ಪ್ರಮುಖವಾಗಿವೆ.

ಅಮೆರಿಕದಲ್ಲಿಯ ಕಂಪನಿಗಳು ಜನವರಿಯಲ್ಲಿ 1,02,943 ಮತ್ತು ಫೆಬ್ರವರಿಯಲ್ಲಿ 77,770 ಉದ್ಯೋಗಿಗಳನ್ನು ವಜಾಗೊಳಿಸಿವೆ. ಕಳೆದ ತಿಂಗಳು 21,387 ಉದ್ಯೋಗಿ (ಒಟ್ಟು ಉದ್ಯೋಗ ಕಡಿತದ ಶೇ.28)ಗಳನ್ನು ವಜಾಗೊಳಿಸುವ ಮೂಲಕ ಟೆಕ್ ಕಂಪನಿಗಳು ಈ ರೇಸ್ ನಲ್ಲಿ ಮುಂದಿವೆ. 

ಕಳೆದ ವರ್ಷದ ನವಂಬರ್ನಲ್ಲಿ 11,000 (ಒಟ್ಟು ಉದ್ಯೋಗಿಗಳ ಶೇ.13) ಉದ್ಯೋಗಿಗಳನ್ನು ವಜಾಗೊಳಿಸಿದ್ದ ಮೆಟಾ ಸ್ಥಾಪಕ ಹಾಗೂ ಸಿಇಒ ಮಾರ್ಕ್ ಝುಕರ್ಬರ್ಗ್ ಅವರು,ಮುಂಬರುವ ತಿಂಗಳುಗಳಲ್ಲಿ ಹಂತ ಹಂತವಾಗಿ ಇನ್ನೂ 10,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಕಳೆದ ವಾರ ಪ್ರಕಟಿಸಿದ್ದಾರೆ.

Similar News