ವಿರಾಟ್ ಕೊಹ್ಲಿಗೆ ಢಿಕ್ಕಿ ಹೊಡೆದು ಕೆರಳಿಸಲು ಯತ್ನಿಸಿದ ಆಸ್ಟ್ರೇಲಿಯದ ಆಲ್ ರೌಂಡರ್ ಸ್ಟೋನಿಸ್

Update: 2023-03-23 08:02 GMT

ಚೆನ್ನೈ: ಭಾರತ ಹಾಗೂ ಆಸ್ಟ್ರೇಲಿಯ ನಡುವೆ ಬುಧವಾರ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ   ಆಸೀಸ್ ನ ವೇಗದ ಬೌಲರ್ ಮಾರ್ಕ್ ಸ್ಟೋನಿಸ್ ಅವರು ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರಿಗೆ  ಢಿಕ್ಕಿ ಹೊಡೆದು ಕೆರಳಿಸಲು ಯತ್ನಿಸಿರುವ ಘಟನೆ ನಡೆದಿದೆ.

21 ನೇ ಓವರ್ ನಲ್ಲಿ ಆಸ್ಟ್ರೇಲಿಯದ ಆಲ್ ರೌಂಡರ್  ಸ್ಟೋನಿಸ್ ಅವರು ರಾಹುಲ್ ಗೆ ಡಾಟ್ ಬಾಲ್ ಎಸೆದು  ತನ್ನ ಬೌಲಿಂಗ್ ಮಾರ್ಕ್‌ ನತ್ತ  ಮರಳುತ್ತಿದ್ದಾಗ ಕೊಹ್ಲಿ ಅವರಿಗೆ ಡಿಕ್ಕಿ ಹೊಡೆದರು. ಕೊಹ್ಲಿ ಸ್ಟ್ರೈಕರ್ ಎಂಡ್ ನಲ್ಲಿದ್ದ ರಾಹುಲ್ ಬಳಿ ಮಾತನಾಡಲು ಹೋಗುತ್ತಿದ್ದಾಗ ಆಸ್ಟ್ರೇಲಿಯದ ಆಲ್ ರೌಂಡರ್ ಗೆ ಢಿಕ್ಕಿ ಹೊಡೆದಿದ್ದಾರೆ. ಆಗ  ಕೊಹ್ಲಿ ನಿಷ್ಠುರ ನೋಟ ಬೀರಿದರು. ಆದರೆ ಇದಕ್ಕೆ ಏನೂ ಪ್ರತಿಕ್ರಿಯಿಸದ  ಸ್ಟೋನಿಸ್ ನಗುತ್ತಾ ಮುಂದೆ ಸಾಗಿದರು.

ಆಸೀಸ್ ಕ್ರಿಕೆಟಿಗ ಸ್ಟೋನಿಸ್  ಏಕದಿನದಲ್ಲಿ ಎರಡು ಬಾರಿ ಭಾರತದ  ಬ್ಯಾಟರ್   ಕೊಹ್ಲಿ ಅನ್ನು ಔಟ್ ಮಾಡಿದ್ದಾರೆ. ಆದರೆ ಅದೇ ಸಮಯದಲ್ಲಿ, 50 ಓವರ್ ಮಾದರಿ ಕ್ರಿಕೆಟ್ ನಲ್ಲಿ ಸ್ಟೋನಿಸ್ ವಿರುದ್ಧ ಕೊಹ್ಲಿ ಉತ್ತಮ ಸರಾಸರಿಯನ್ನು ಹೊಂದಿದ್ದಾರೆ.

ಕೊಹ್ಲಿ ಹಾಗೂ ಸ್ಟೋನಿಸ್ 2019ರಲ್ಲಿ ಐಪಿಎಲ್ ನಲ್ಲಿ ಆರ್ ಸಿಬಿ ಪರ ಒಟ್ಟಿಗೆ ಆಡಿದ್ದಾರೆ. 2022ರ ಟಿ-20 ವಿಶ್ವಕಪ್ ನಲ್ಲಿ ಕೊಹ್ಲಿ ಅವರು ಸ್ಟೋನಿಸ್ ರೊಂದಿಗೆ ಪೋಸ್ ನೀಡಿದ್ದರು.

ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಭಾರತಕ್ಕೆ ಗೆಲ್ಲಲು  270 ರನ್ನುಗಳ ಗುರಿಯನ್ನು ನೀಡಿತ್ತು. ರೋಹಿತ್ ಶರ್ಮಾ ಹಾಗೂ  ಶುಬ್‌ಮನ್ ಗಿಲ್ 65 ರನ್‌ಗಳನ್ನು ಸೇರಿಸುವುದರೊಂದಿಗೆ ಉತ್ತಮ  ಆರಂಭವನ್ನು ನೀಡಿದ್ದರು. ಆದರೆ ಈ ಇಬ್ಬರು ಆಟಗಾರರು ಬೆನ್ನಿಬೆನ್ನಿಗೆ ಔಟಾದರು.

ಭಾರತದ ನಾಯಕ ರೋಹಿತ್ ಔಟಾದ ನಂತರ, ಕೊಹ್ಲಿ  ತಮ್ಮ 65 ನೇ ಏಕದಿನ  ಅರ್ಧಶತಕವನ್ನು(53 ರನ್)  ಗಳಿಸಿ ತಂಡವನ್ನು ಗಳಿಸಿ ತಂಡವನ್ನು ಆಧರಿಸಿದರು. ಆದರೆ ದುರದೃಷ್ಟವಶಾತ್ ಅವರಿಗೆ  ಅರ್ಧಶತಕವನ್ನು ಶತಕವಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. 36 ನೇ ಓವರ್‌ನಲ್ಲಿ ಆಷ್ಟನ್ ಅಗರ್ ಅವರ ಎಸೆತದಲ್ಲಿ ಡೇವಿಡ್ ವಾರ್ನರ್‌ಗೆ ಕ್ಯಾಚ್ ನೀಡಿದರು.

ಆದರೆ ಅರ್ಧಶತಕವನ್ನು ತಲುಪುವ ಮೊದಲು ಕೊಹ್ಲಿ ಪ್ರೇಕ್ಷಕರಿಗೆ  ಸಾಕಷ್ಟು ಮನರಂಜನೆ ನೀಡಿದ್ದರು. ಕೊಹ್ಲಿಗೆ   ಸ್ಟೋನಿಸ್ ಢಿಕ್ಕಿ ಹೊಡೆದಾಗ ಎಂ.ಎ. ಚಿದಂಬರಂ ಸ್ಟೇಡಿಯಮ್ ನಲ್ಲಿ ನೆರೆದಿದ್ದ ಅಭಿಮಾನಿಗಳಿಂದ ಜೋರಾದ ಪ್ರತಿಕ್ರಿಯೆ ವ್ಯಕ್ತವಾಗಿದೆ.

Similar News