ಆಸ್ಟ್ರೇಲಿಯ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಆಡದ ರೋಹಿತ್: ಸುನೀಲ್ ಗವಾಸ್ಕರ್ ಅಸಮಾಧಾನ

Update: 2023-03-23 09:47 GMT

ಹೊಸದಿಲ್ಲಿ: "ಕುಟುಂಬದ ಬದ್ಧತೆಗಳಿಂದಾಗಿ" ಆಸ್ಟ್ರೇಲಿಯ  ವಿರುದ್ಧದ ಮೊದಲ ಏಕದಿನ ಪಂದ್ಯದಿಂದ  ನಾಯಕ ರೋಹಿತ್ ಶರ್ಮಾ ಹೊರಗುಳಿದಿರುವುದಕ್ಕೆ ಭಾರತೀಯ ಕ್ರಿಕೆಟ್ ತಂಡದ ದಂತಕತೆ ಸುನೀಲ್ ಗವಾಸ್ಕರ್(Sunil Gavaskar ) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏಕದಿನ ವಿಶ್ವಕಪ್ ಈ ವರ್ಷವೇ ನಡೆಯುತ್ತಿರುವ ಕಾರಣ ಅಂತಹ ಕಾರಣಗಳಿಗೆ ಸ್ಥಾನವಿಲ್ಲ ಎಂದು  ಅವರು ಹೇಳಿದರು.

ರೋಹಿತ್ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು.  ಆತಿಥೇಯರು ಕೆ.ಎಲ್. ರಾಹುಲ್ ಅವರ ಅರ್ಧಶತಕದ ನೆರವಿನಿಂದ ಜಯ ಸಾಧಿಸಿದ್ದರು. ಆದಾಗ್ಯೂ, ಮುಂದಿನ ಎರಡು ಪಂದ್ಯಗಳಲ್ಲಿ ರೋಹಿತ್ ಆಡಿದ್ದರೂ  ಆಸ್ಟ್ರೇಲಿಯ  ಸರಣಿಯನ್ನು ವಶಪಡಿಸಿಕೊಳ್ಳುವುದನ್ನು ತಡೆಯಲು ಸಾಧ್ಯವಾಗಿಲ್ಲ. ಗವಾಸ್ಕರ್ ಅವರು ರೋಹಿತ್ ತೆಗೆದುಕೊಂಡ ನಿರ್ಧಾರದಿಂದ ಸಂತೋಷವಾಗಿಲ್ಲ. "ನಾಯಕತ್ವದಲ್ಲಿ ನಿರಂತರತೆ" ತಂಡಕ್ಕೆ  ಅಗತ್ಯವಿದೆ ಎಂದು ಒತ್ತಿ ಹೇಳಿದರು.

"ಅವರು (ರೋಹಿತ್) ಪ್ರತಿ ಪಂದ್ಯವನ್ನು ಆಡುವ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ನಾಯಕನಾದವನು ಒಂದು ಪಂದ್ಯಕ್ಕೆ ಲಭ್ಯವಿದ್ದು ಉಳಿದ ಪಂದ್ಯಗಳಿಗೆ ಇರದಿರುವುದು ಸರಿಯಲ್ಲ. ಇದು ತುಂಬಾ ಮುಖ್ಯವಾಗಿದೆ. ಕುಟುಂಬದ ಬದ್ಧತೆ ಎಂದು ನನಗೆ ತಿಳಿದಿದೆ,  ಅವರು ಅಲ್ಲಿಯೇ ಇರಬೇಕಾಗಿತ್ತು. ಇದು ಅರ್ಥವಾಗುವಂತಹದ್ದಾಗಿದೆ” ಎಂದು ಗವಾಸ್ಕರ್ 'ಸ್ಟಾರ್ ಸ್ಪೋರ್ಟ್ಸ್‌'ಗೆ ತಿಳಿಸಿದರು.

“ವಿಶ್ವಕಪ್‌ ವಿಷಯಕ್ಕೆ  ಬಂದಾಗ ನೀವು ಕುಟುಂಬದ ಬದ್ಧತೆಯನ್ನು ಹೊಂದಲು ಸಾಧ್ಯವಿಲ್ಲ. ಬಹುಶಃ ಈ ಮೊದಲು, ತುರ್ತು ಪರಿಸ್ಥಿತಿಯನ್ನು ಹೊರತುಪಡಿಸಿ ನಿಮ್ಮಲ್ಲಿರುವ ಎಲ್ಲವನ್ನೂ ಪೂರ್ಣಗೊಳಿಸಬೇಕು. ತುರ್ತು ಪರಿಸ್ಥಿತಿ ಸಂಪೂರ್ಣವಾಗಿ ವಿಭಿನ್ನವಾಗಿದೆ. ನಾಯಕತ್ವದಲ್ಲಿ ನಿರಂತರತೆ ಅಗತ್ಯವಿದೆ’’ ಎಂದು ಗವಾಸ್ಕರ್  ಹೇಳಿದರು.

Similar News