ಉಡುಪಿ: ಸಚಿವ ಕೋಟರಿಂದ ಕಂಟೈನರ್ ಮನೆ ಉದ್ಘಾಟನೆ

Update: 2023-03-23 16:00 GMT

ಉಡುಪಿ, ಮಾ.23: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಪ.ಜಾತಿ ಮತ್ತು ಪಂಗಡದ ಅಲೆಮಾರಿ ಅಭಿವೃದ್ಧಿ ನಿಗಮ ಹಾಗೂ ಚೇರ್ಕಾಡಿ ಗ್ರಾಪಂಗಳ ಸಂಯುಕ್ತ ಆಶ್ರಯದಲ್ಲಿ ಚೇರ್ಕಾಡಿಯ ಮೈತಗುಲಿಯಲ್ಲಿ ಕಂಟೈನರ್ ಮನೆ ಉದ್ಘಾಟನೆ ಹಾಗೂ ಸವಲತ್ತು ವಿತರಣೆಯನ್ನು ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ  ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ  ಮಾತನಾಡಿದ ಸಚಿವರು, ಬಡವರ್ಗದ ಜನತೆಗೆ ಇಂತಹ ಕಂಟೈನರ್ ಮನೆಗಳು ಅತ್ಯಂತ ಹೆಚ್ಚು ಪ್ರಯೋಜನಕಾರಿಯಾಗಿದ್ದು, ಈ ಮನೆ ನಿರ್ಮಾಣದ ವೆಚ್ಚವೂ ಸಹ ಕಡಿಮೆಯಾಗಲಿದೆ. 6 ಲಕ್ಷ ರೂ ವೆಚ್ಚದಲ್ಲಿ ಈ ಮನೆ ನಿರ್ಮಾಣಗೊಳ್ಳಲಿದ್ದು, ಅರ್ಹ ಬಡ ಜನತೆಯನ್ನು ಗುರುತಿಸಿ, ಇಲಾಖೆ ವತಿಯಿಂದ ಇಂತಹ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದರು. 

ಕಾರ್ಯಕ್ರಮದಲ್ಲಿ ಚೇರ್ಕಾಡಿ ಗ್ರಾಪಂ ಅಧ್ಯಕ್ಷೆ ರೇಖಾ ಭಟ್, ಆರೂರು ಗ್ರಾಪಂ ಅಧ್ಯಕ್ಷೆ ಮಮತಾ ಶೆಟ್ಟಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅನಿತಾ ಮಂಡ್ಲೂರು, ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ ಮೂರ್ತಿ, ಬ್ರಹ್ಮಾವರ ತಾಪಂ ಕಾರ್ಯನಿರ್ವಹಣಾಧಿಕಾರಿ ಇಬ್ರಾಂಪುರ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

Similar News