ನ್ಯಾಯಾಧೀಶರಿಗೆ ಬೆದರಿಕೆ: ಕಾನೂನು ಸಚಿವರ 'ಭಾರತ ವಿರೋಧಿ' ಹೇಳಿಕೆಗೆ ತ್ರಿಪುರಾ ಬಾರ್ ಕೌನ್ಸಿಲ್ ಪ್ರತಿಕ್ರಿಯೆ

Update: 2023-03-24 10:15 GMT

ಅಗರ್ತಲ: ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು (Union Law Minister Kiren Rijiju) ಅವರ ನಿವೃತ್ತ ನ್ಯಾಯಾಧೀಶರ ವಿರುದ್ಧದ ಹೇಳಿಕೆಯನ್ನು ಖಂಡಿಸಿರುವ ತ್ರಿಪುರ ಬಾರ್ ಕೌನ್ಸಿಲ್ (Tripura Bar Council), ಅವರ ಹೇಳಿಕೆಯು ನ್ಯಾಯಾಂಗದಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುವ ಪ್ರಯತ್ನ ಎಂದು ಟೀಕಿಸಿದೆ ಎಂದು ndtv.com ವರದಿ ಮಾಡಿದೆ.

ಭಾರತ ವಿರೋಧಿ ಗುಂಪಿನಲ್ಲಿರುವ ಕೆಲವು ನಿವೃತ್ತ ನ್ಯಾಯಾಧೀಶರು ಹಾಗೂ ಹೋರಾಟಗಾರರು ಭಾರತದ ನ್ಯಾಯಾಂಗವು ವಿರೋಧ ಪಕ್ಷದ ಪಾತ್ರ ವಹಿಸುವಂತೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಕಾನೂನು ಸಚಿವ ಕಿರಣದ ರಿಜಿಜು ಮಾರ್ಚ್ 18ರಂದು 'ಇಂಡಿಯಾ ಟುಡೆ' ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಮಾಲೋಚನಾ ಕೂಟದಲ್ಲಿ ಆರೋಪಿಸಿದ್ದರು.

ಭಾರತದ ವಿರುದ್ಧ ವರ್ತಿಸುತ್ತಿರುವವರು ಬೆಲೆ ತೆರಬೇಕಾಗುತ್ತದೆ ಎಂದು ಅವರು ಪದೇ ಪದೇ ಎಚ್ಚರಿಕೆ ನೀಡಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ತ್ರಿಪುರ ಬಾರ್ ಕೌನ್ಸಿಲ್ ಅಧ್ಯಕ್ಷ ಪುರುಷೋತ್ತಮ್ ರೇ ಬರ್ಮನ್, "ಸರ್ಕಾರದ ನಿರ್ಣಯಗಳ ವಿರುದ್ಧ ನಿವೃತ್ತ ನ್ಯಾಯಾಧೀಶರು ಮಾತಾಡದಂತೆ ನಿರ್ಬಂಧಿಸುವ ಮೂಲಕ ಕೇಂದ್ರ ಸರ್ಕಾರವು ನ್ಯಾಯಾಂಗದ ಮೇಲೆ ಒತ್ತಡ ಹೇರುತ್ತಿದೆ. ಇದು ಸರ್ಕಾರಕ್ಕೆ ತಲೆಬಾಗಲು ಸಿದ್ಧರಿಲ್ಲದ ನ್ಯಾಯಾಧೀಶರಿಗೆ ಬೆದರಿಕೆ ಒಡ್ಡಿದಂತೆ. ಭಾರತದ ನ್ಯಾಯಾಂಗ ಸೇರಿದಂತೆ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನೆಲ್ಲ ಕೇಂದ್ರ ಸರ್ಕಾರವು ವಶಪಡಿಸಿಕೊಳ್ಳಲು ಯತ್ನಿಸುತ್ತಿದೆ. ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೇರಿದಂತೆ ಸಂಪೂರ್ಣ ನ್ಯಾಯಾಂಗವು ಅದರ ಬೆರಳ ತುದಿಯಲ್ಲಿ ಕುಣಿಯುವುದು ಬೇಕಾಗಿದೆ. ಈ ಸಂಗತಿ ಇತ್ತೀಚೆಗೆ ಉಪ ರಾಷ್ಟ್ರಪತಿ ಹಾಗೂ ರಾಜ್ಯಸಭಾಧ್ಯಕ್ಷ ಜಗದೀಪ್ ಧನಕರ್ ಮಾಡಿರುವ ಭಾಷಣದಿಂದ ದೃಢವಾಗಿದೆ" ಎಂದು ಹೇಳಿದ್ದಾರೆ.

ತ್ರಿಪುರ ಬಾರ್ ಕೌನ್ಸಿಲ್ ಅಧ್ಯಕ್ಷರು ತ್ರಿಪುರ ಹೈಕೋರ್ಟ್‌ಗೆ ಖಾಯಂ ಮುಖ್ಯ ನ್ಯಾಯಾಧೀಶರನ್ನು ನೇಮಿಸುವಂತೆ ಹಾಗೂ ಹೈಕೋರ್ಟ್‌ನ ಖಾಲಿ ಇರುವ ಹುದ್ದೆಗಳಿಗೆ ನ್ಯಾಯಾಧೀಶರನ್ನು ನೇಮಿಸುವಂತೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಡಿ.ವೈ‌.ಚಂದ್ರಚೂಡ್ ಹಾಗೂ ಕೊಲಿಜಿಯಂನ ಇತರ ಸದಸ್ಯರಿಗೆ ಪತ್ರವನ್ನೂ ಬರೆದಿದ್ದಾರೆ.

ಇದನ್ನೂ ಓದಿ: ಪತ್ರಿಕೆಗಳ ಕಾರ್ಯನಿರ್ವಹಣೆಯ ನಡುವೆ ಸರಕಾರ ಮಧ್ಯಪ್ರವೇಶಿಸುವುದಿಲ್ಲ: ಸಂಸತ್ತಿಗೆ ತಿಳಿಸಿದ ಸಚಿವ ಅನುರಾಗ್ ಠಾಕೂರ್

Similar News