ನಿಮ್ಮಂತಹ ಹೇಡಿ, ಸರ್ವಾಧಿಕಾರಿ ಮುಂದೆ ನಮ್ಮ ಕುಟುಂಬ ತಲೆಬಾಗುವುದಿಲ್ಲ: ಪ್ರಧಾನಿಗೆ ಪ್ರಿಯಾಂಕ ಗಾಂಧಿ ಸವಾಲು

"ನಮ್ಮ ಇಡೀ ಕುಟುಂಬವನ್ನು, ಕಾಶ್ಮೀರಿ ಪಂಡಿತರನ್ನು ಅವಮಾನಿಸಿದಕ್ಕಾಗಿ ನಿಮ್ಮನ್ನು ಸಂಸತ್ತಿನಿಂದ ಅನರ್ಹಗೊಳಿಸಿಲ್ಲ"

Update: 2023-03-24 14:12 GMT

ಹೊಸದಿಲ್ಲಿ: ರಾಹುಲ್‌ ಗಾಂಧಿ ಅವರ ಲೋಕಸಭಾ ಸದಸ್ಯತ್ವ ರದ್ದಾಗುತ್ತಿದ್ದಂತೆ ಕಾಂಗ್ರೆಸ್‌ ವಲಯದಲ್ಲಿ ಸಾಕಷ್ಟು ಆಕ್ರೋಶ ಹುಟ್ಟುಹಾಕಿದೆ. ರಾಹುಲ್‌ ಸಂಸದ ಸ್ಥಾನ ಅನೂರ್ಜಿತಗೊಳ್ಳುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿ ಪ್ರಿಯಾಂಕಾ ಗಾಂಧಿ ಸರಣಿ ಟ್ವೀಟ್‌ ಮಾಡಿದ್ದಾರೆ. 

“ಪ್ರಧಾನಿ ಮೋದಿಯವರೇ, ನಿಮ್ಮ ಚಮಚಾಗಳು ಹುತಾತ್ಮ ಪ್ರಧಾನಿಯ ಮಗನನ್ನು ದೇಶದ್ರೋಹಿ ಮೀರ್ ಜಾಫರ್ ಎಂದು ಕರೆದರು. ನಿಮ್ಮ ಮುಖ್ಯಮಂತ್ರಿಯೊಬ್ಬರು ರಾಹುಲ್ ಗಾಂಧಿಯವರ ತಂದೆ ಯಾರು ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ.. ಕಾಶ್ಮೀರಿ ಪಂಡಿತರ ಸಂಸ್ಕೃತಿ ಪ್ರಕಾರ, ತನ್ನ ತಂದೆಯ ಮರಣದ ನಂತರ ಮಗನು ಪೇಟವನ್ನು ಧರಿಸುತ್ತಾನೆ, ತನ್ನ ಕುಟುಂಬದ ಸಂಪ್ರದಾಯವನ್ನು ಉಳಿಸಿಕೊಳ್ಳುತ್ತಾನೆ” ಎಂದು ಪ್ರಿಯಾಂಕ ಗಾಂಧಿ ಬರೆದಿದ್ದಾರೆ.

“ನಮ್ಮ ಇಡೀ ಕುಟುಂಬ ಮತ್ತು ಕಾಶ್ಮೀರಿ ಪಂಡಿತ ಸಮುದಾಯವನ್ನು ಅವಮಾನಿಸಿದ ನೀವು ಸಂಸತ್ತಿನಲ್ಲಿ ನೆಹರೂ ಹೆಸರನ್ನು ಏಕೆ ಇಡುವುದಿಲ್ಲ ಎಂದು ಕೇಳಿದ್ದೀರಿ. ಆದರೆ, ಅದಕ್ಕಾಗಿ ಯಾವ ನ್ಯಾಯಾಧೀಶರೂ ನಿಮಗೆ ಎರಡು ವರ್ಷಗಳ ಶಿಕ್ಷೆ ನೀಡಿಲ್ಲ. ನಿಮ್ಮನ್ನು ಸಂಸತ್ತಿನಿಂದ ಅನರ್ಹಗೊಳಿಸಿಲ್ಲ.” ಎಂದು ಪ್ರಿಯಾಂಕ ಟ್ವೀಟ್‌ ಮಾಡಿದ್ದಾರೆ. 

ನಿಜವಾದ ದೇಶಪ್ರೇಮಿಯಂತೆ ರಾಹುಲ್ ಜಿ ಅದಾನಿ ಲೂಟಿಯನ್ನು ಪ್ರಶ್ನಿಸಿದ್ದಾರೆ. ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಮೇಲೆ ಪ್ರಶ್ನೆಗಳನ್ನು ಎತ್ತಿದ್ದಾರೆ. ನಿಮ್ಮ ಗೆಳೆಯ ಗೌತಮ್ ಅದಾನಿ ದೇಶದ ಸಂಸತ್ತಿಗಿಂತ ದೊಡ್ಡವರೇ?  ಅದಾನಿ ಲೂಟಿಯನ್ನು ಪ್ರಶ್ನಿಸಿದ ತಕ್ಷಣ ನೀವು ಬೆಚ್ಚಿಬಿದ್ದಿದ್ದೀರ? ಎಂದು ಪ್ರಿಯಾಂಕ ಪ್ರಶ್ನಿಸಿದ್ದಾರೆ. 

ನೀವು ನಮ್ಮ ಕುಟುಂಬವನ್ನು ʼಕುಟುಂಬವಾದಿʼ ಎಂದು ಕರೆಯುತ್ತೀರಿ. ಈ ಕುಟುಂಬವು ಭಾರತದ ಪ್ರಜಾಪ್ರಭುತ್ವದ ಬೇರನ್ನು ಗಟ್ಟಿಗೊಳಿಸಲು ತನ್ನ  ರಕ್ತವನ್ನು ನೀರಿನಂತೆ ಹರಿಸಿದೆ. ಅದನ್ನು ನಾಶಮಾಡಲು ನೀವು ಪ್ರಯತ್ನಿಸುತ್ತಿದ್ದೀರಿ. ಈ ಕುಟುಂಬವು ಭಾರತದ ಜನರ ಧ್ವನಿಯನ್ನು ಎತ್ತಿತು, ತಲೆಮಾರುಗಳಿಂದ ಸತ್ಯಕ್ಕಾಗಿ ಹೋರಾಡಿತು ಎಂದ ಪ್ರಿಯಾಂಕ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರ ಸವಾಲು ಹಾಕಿರುವ ಪ್ರಿಯಾಂಕ ಗಾಂಧಿ, ನೀವು ಏನು ಬೇಕಾದರೂ ಮಾಡಿ, ನಾವು ತಲೆ ಬಾಗುವುದಿಲ್ಲ ಎಂದು ಹೇಳಿದ್ದಾರೆ. 

“ನಮ್ಮ ರಕ್ತನಾಳಗಳಲ್ಲಿ ಹರಿಯುವ ರಕ್ತಕ್ಕೆ ಒಂದು ವಿಶೇಷತೆ ಇದೆ. ಅದು ನಿಮ್ಮಂತಹ ಹೇಡಿ, ಅಧಿಕಾರದ ದಾಹಿ ಸರ್ವಾಧಿಕಾರಿಯ ಮುಂದೆ ಎಂದಿಗೂ ತಲೆಬಾಗುವುದಿಲ್ಲ. ನೀವು ಏನು ಬೇಕಾದರೂ ಮಾಡಿ..” ಎಂದು ಪ್ರಿಯಾಂಕ ಗಾಂಧಿ ಟ್ವೀಟ್‌ ಮಾಡಿದ್ದಾರೆ.

Similar News