ʼಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹʼ ಪ್ರಜಾಪ್ರಭುತ್ವದ ಕಗ್ಗೊಲೆ: ಯು.ಟಿ.ಖಾದರ್ ಆಕ್ರೋಶ

Update: 2023-03-24 12:58 GMT

ಮಂಗಳೂರು: ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಆದೇಶ ಹೊರಡಿಸಿರುವುದು ಸಂಸದೀಯ ನಿಯಮಗಳು ಹಾಗೂ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ರಾಜ್ಯ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೋದಿ ಸರ್ ನೇಮ್’ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಪ್ರಕಟಿಸಿರುವ ಎರಡು ವರ್ಷ ಜೈಲು ಶಿಕ್ಷೆಯ ಬಗ್ಗೆ ಮೇಲ್ಮನವಿ ಸಲ್ಲಿಸಲು 30 ದಿನಗಳ ಅವಕಾಶ ನೀಡಿದೆ. ನ್ಯಾಯಾಲಯದ ತೀರ್ಪಿನ ಬಗ್ಗೆ ನಾನೇನೂ ಹೇಳಲಾರೆ. ಆದರೆ ನ್ಯಾಯಾಲಯವೇ ಆದೇಶವನ್ನು ಅಮಾನತ್ತಿನಲ್ಲಿರಿಸಿ ಮೇಲ್ಮನವಿಗೆ ಅವಕಾಶ ನೀಡಿರುವಾಗ ಸಂಸದ ಸ್ಥಾನದಿಂದ ಅರ್ಹಗೊಳಿಸಿರುವುದು ಎಷ್ಟು ಸರಿ? ಈ ಪ್ರಕ್ರಿಯೆ ಮುಂದೆ ದೇಶದ ಪ್ರತಿಯೊಬ್ಬ ಸಂಸದರಿಗೂ ಅನ್ವಯವಾಗಲಿದೆಯೇ? ಹಾಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ ಎಂದರು.

ಸತ್ಯ ವಿಚಾರದ ಬಗ್ಗೆ ಮಾತನಾಡಿದ್ದ ರಾಹುಲ್ ಗಾಂಧಿಯನ್ನು ಬಿಡದವರು ಇನ್ನು ಜನಸಾಮಾನ್ಯರನ್ನು ಬಿಡಬಹುದೇ ? ದೇಶಾದ್ಯಂತ ರಾಹುಲ್ ಗಾಂಧಿಗೆ ಸಿಗುವ ಅಭೂತಪೂರ್ವ ಜನಬೆಂಬಲವನ್ನು ಸಹಿಸದ ಆಡಳಿತ ಪಕ್ಷವು ಇದೀಗ ರಾಹುಲ್ ಗಾಂಧಿಯ ಧ್ವನಿಯನ್ನು ಅಡಗಿಸಲು ಹತಾಶ ಪ್ರಯತ್ನ ಮಾಡುತ್ತಿವೆ. ಇದಕ್ಕೆ ಕಾಂಗ್ರೆಸ್ ಯಾವತ್ತೂ ಕೂಡ ಹೆದರುವುದಿಲ್ಲ. ರಾಹುಲ್ ಗಾಂಧಿಯೊಂದಿಗೆ  ಕಾಂಗ್ರೆಸ್‌ನ ಪ್ರತಿಯೊಬ್ಬ ಕಾರ್ಯಕರ್ತರೂ ಕೈ ಜೋಡಿಸಲಿದ್ದಾರೆ ಎಂದು ಯು.ಟಿ.ಖಾದರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ದ.ಕ. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಪಕ್ಷದ ಮುಖಂಡರಾದ ಸದಾಶಿವ ಉಳ್ಳಾಲ್, ಸಂತೋಷ್ ಕುಮಾರ್, ರಫೀಕ್ ಅಂಬ್ಲಮೊಗರು ಮತ್ತಿತರರು ಉಪಸ್ಥಿತರಿದ್ದರು. 

Similar News