×
Ad

ನಕಲಿ ಪಿಎಂಒ ಅಧಿಕಾರಿಯ ಜಾಮೀನು ಅರ್ಜಿಗೆ ಜಮ್ಮು-ಕಾಶ್ಮೀರ ನ್ಯಾಯಾಲಯದ ತಿರಸ್ಕಾರ

Update: 2023-03-24 22:20 IST

ಶ್ರೀನಗರ,ಮಾ.24: ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ)ಯ ಅಧಿಕಾರಿಯ ಸೋಗಿನಲ್ಲಿ ವಂಚಿಸಿದ್ದ ಗುಜರಾತ್ ನಿವಾಸಿಯೋರ್ವ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಜಮ್ಮು-ಕಾಶ್ಮೀರದ ನ್ಯಾಯಾಲಯವೊಂದು ಗುರುವಾರ ತಿರಸ್ಕರಿಸಿದೆ.

ಆರೋಪಿ ಕಿರಣಭಾಯಿ ಪಟೇಲ್ ಉನ್ನತ ಮಟ್ಟದ ಆಡಳಿತಾತ್ಮಕ ಮತ್ತು ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿದ್ದ ಮತ್ತು ವಿಭಿನ್ನ ಉದ್ದೇಶಗಳಿಗಾಗಿ ಅವರಿಂದ ಹಣ ಪಡೆದಿರಬಹುದು ಎಂದು ಸೂಚಿಸುವ ಅಂಶಗಳಿವೆ ಎಂದು ಶ್ರೀನಗರದ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ರಾಜಾ ಮುಹಮ್ಮದ್ ತಸ್ಲೀಮ್ ಅವರು ಆದೇಶದಲ್ಲಿ ಹೇಳಿದ್ದಾರೆ.

ಈ ಅಂಶಗಳನ್ನು ಪರಿಶೀಲಿಸಲಾಗಿಲ್ಲ,ಹೀಗಾಗಿ ವಿವರವಾದ ತನಿಖೆಯ ಅಗತ್ಯವಿದೆ ಎಂದು ನ್ಯಾಯಾಲಯವು ಹೇಳಿದೆ.

ಮಾ.3ರಂದು ಶ್ರೀನಗರದ ಲಲಿತ್ ಗ್ರಾಂಡ್ ಪಂಚತಾರಾ ಹೋಟೆಲ್ವೊಂದರಿಂದ ಪಟೇಲ್ನನ್ನು ಬಂಧಿಸಲಾಗಿತ್ತು. ಪ್ರಧಾನಿ ಕಚೇರಿಯ ಕಾರ್ಯತಂತ್ರ ಮತ್ತು ಪ್ರಚಾರ ವಿಭಾಗದ ಹೆಚ್ಚುವರಿ ನಿರ್ದೇಶಕ ಎಂದು ತನ್ನನ್ನು ಪರಿಚಯಿಸಿಕೊಂಡಿದ್ದ ಪಟೇಲ್ ಜಮ್ಮು-ಕಾಶ್ಮೀರಕ್ಕೆ ತನ್ನ ಮೂರು ಭೇಟಿಗಳ ಸಂದರ್ಭದಲ್ಲಿ ಬುಲೆಟ್ಪ್ರೂಫ್ ಕಾರು,ಭದ್ರತಾ ಸಿಬ್ಬಂದಿಗಳು ಮತ್ತು ಪಂಚತಾರಾ ಹೋಟೆಲ್ನಲ್ಲಿ ಅಧಿಕೃತ ವಸತಿ ಸೇರಿದಂತೆ ಪಿಎಂಒ ಅಧಿಕಾರಿಗಳಿಗೆ ಸಾಮಾನ್ಯವಾಗಿ ನೀಡುವ ಸೌಲಭ್ಯಗಳನ್ನು ಆಡಳಿತದಿಂದ ಪಡೆದುಕೊಂಡಿದ್ದ. ಮಾ.2ರಂದು ವಂಚನೆ ಮತ್ತು ಫೋರ್ಜರಿ ಆರೋಪಗಳಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು.

ಪಟೇಲ್ ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ಸಂಪರ್ಕಿಸಬಹುದು ಮತ್ತು ಅವರು ತನ್ನ ವಿರುದ್ಧ ಹೇಳಿಕೆ ನೀಡದಂತೆ ಖಂಡಿತವಾಗಿಯೂ ಪ್ರಯತ್ನಿಸಬಹುದು,ಜೊತೆಗೆ ತನಿಖಾ ಸಂಸ್ಥೆಯು ಇನ್ನೂ ಸಂಗ್ರಹಿಸಿರದ ಸಾಕ್ಷಗಳನ್ನು ನಾಶ ಮಾಡಬಹುದು ಎಂಬ ಆತಂಕಗಳಿವೆ ಎಂದು ನ್ಯಾಯಾಲಯವು ಗುರುವಾರದ ತನ್ನ ಆದೇಶದಲ್ಲಿ ಹೇಳಿದೆ.

ಸಂಚಿನಲ್ಲಿ ಪಟೇಲ್ ಜೊತೆ ಇನ್ನೂ ಕೆಲವರು ಸೇರಿಕೊಂಡಿದ್ದಾರೆ ಮತ್ತು ಈ ಅಂಶವನ್ನು ಪರಿಶೀಲಿಸುವ ಅಗತ್ಯವಿದೆ. ಈ ನಿರ್ಣಾಯಕ ಹಂತದಲ್ಲಿ ಆರೋಪಿಗೆ ಜಾಮೀನು ಮಂಜೂರು ಮಾಡಿದರೆ ಅದು ಖಂಡಿತವಾಗಿಯೂ ತನಿಖೆಯ ಸ್ವರೂಪವನ್ನು ನಾಶಗೊಳಿಸುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಪಟೇಲ್ ನ ತವರು ರಾಜ್ಯ ಗುಜರಾತಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ನಂಬಿಕೆ ದ್ರೋಹ,ವಂಚನೆ ಮತ್ತು ಕ್ರಿಮಿನಲ್ ಪಿತೂರಿ ಆರೋಪಗಳಲ್ಲಿ ಆತನ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Similar News