×
Ad

ಫ್ರಾನ್ಸ್: ಹೊಸ ಪಿಂಚಣಿ ಯೋಜನೆ ವಿರುದ್ಧ ಪ್ರತಿಭಟನೆ; 441 ಪೊಲೀಸರಿಗೆ ಗಾಯ

Update: 2023-03-24 22:41 IST

ಪ್ಯಾರಿಸ್, ಮಾ.24: ಫ್ರಾನ್ಸ್ ಸರಕಾರದ ಹೊಸ ಪಿಂಚಣಿ ಯೋಜನೆಯನ್ನು ವಿರೋಧಿಸಿ ದೇಶದಾದ್ಯಂತ ನಡೆದ ಪ್ರತಿಭಟನೆಯಲ್ಲಿ 441 ಭದ್ರತಾ ಸಿಬಂದಿಗಳಿಗೆ  ಗಾಯವಾಗಿದೆ. ಪ್ರತಿಭಟನೆಗೆ ಸಂಬಂಧಿಸಿ 457 ಮಂದಿಯನ್ನು ಬಂಧಿಸಲಾಗಿದೆ ಎಂದು ಆಂತರಿಕ ಸಚಿವ ಜೆರಾಲ್ಡ್ ದರ್ಮಾನಿನ್ ಹೇಳಿದ್ದಾರೆ.

ಶುಕ್ರವಾರ ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನ ಬೀದಿಗಳಲ್ಲಿ ವ್ಯಾಪಕ ಪ್ರತಿಭಟನೆ ನಡೆದಿದ್ದು ಹಲವೆಡೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಲಾಗಿದೆ. ಪ್ರತಿಭಟನೆ ಸಂದರ್ಭ ಆಗಿರುವ ನಾಶ-ನಷ್ಟದ ಬಗ್ಗೆ ಇನ್ನೂ ನಿಖರ ಅಂಕಿಅಂಶ ಲಭಿಸಿಲ್ಲ. ಪ್ರಾಥಮಿಕ ಮಾಹಿತಿಯ ಪ್ರಕಾರ ಘರ್ಷಣೆಯಲ್ಲಿ 441 ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಪ್ರತಿಭಟನೆಯನ್ನು ನಿಯಂತ್ರಿಸುವಲ್ಲಿ ಪೊಲೀಸರು ಅತ್ಯಂತ ಸಂಯಮದಿಂದ ಕ್ರಮ ಕೈಗೊಳ್ಳುತ್ತಿರುವುದು ಶ್ಲಾಘನೀಯ ಎಂದವರು ಹೇಳಿದ್ದಾರೆ.

ಪ್ರತಿಭಟನಾಕಾರರ ಆಗ್ರಹಕ್ಕೆ ಮಣಿದು ಪಿಂಚಣಿ ಸುಧಾರಣೆ ಕ್ರಮಗಳನ್ನು ಹಿಂದಕ್ಕೆ ಪಡೆಯುವ ಮಾತೇ ಇಲ್ಲ. ಈ ಮಸೂದೆಗೆ ಸಂಸತ್ತಿನಲ್ಲಿ ಅನುಮೋದನೆ ದೊರಕಿದೆ. ಆದ್ದರಿಂದ ವಾಪಾಸು ಪಡೆದರೆ ಸರಕಾರದ ವೈಫಲ್ಯವಾಗುತ್ತದೆ. ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆದ ಚರ್ಚೆಯನ್ನು ನಾವು ಒಪ್ಪಬೇಕು, ಹಿಂಸಾತ್ಮಕ ರೀತಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನಲ್ಲ ಎಂದು ಸಚಿವ ದರ್ಮಾನಿನ್ ಹೇಳಿದ್ದಾರೆ.

ಈ ಮಧ್ಯೆ, ಗುರುವಾರ ಬೋರ್ಡಿಯಕ್ಸ್ ನಗರದ ಸಭಾಂಗಣದ ಪ್ರವೇಶದ್ವಾರದ ಬಳಿ ಬೆಂಕಿಹಚ್ಚಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿರುವುದಾಗಿ ಮೇಯರ್ ಪಿಯರೆ ಹರ್ಮಿಕ್ರನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

Similar News