ರಾಹುಲ್‌ ಕ್ಷಮೆ ಕೋರಿದ್ದರೆ ಅನರ್ಹರಾಗುತ್ತಿರಲಿಲ್ಲ: ಸಚಿವ ಅಠಾವಳೆ

Update: 2023-03-25 11:07 GMT

ಹೊಸದಿಲ್ಲಿ: ಇಂಗ್ಲೆಂಡ್‌ನಲ್ಲಿ ನೀಡಿದ್ದ ಹೇಳಿಕೆಗಳಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕ್ಷಮೆ ಕೋರಿದ್ದರೆ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸುತ್ತಿರಲಿಲ್ಲ ಎಂದು ಕೇಂದ್ರ ಸಚಿವ ರಾಮದಾಸ್‌ ಅಠಾವಳೆ ಹೇಳಿದ್ದಾರೆ. ಅವರನ್ನು ಅನರ್ಹಗೊಳಿಸಿರುವುದು ಸರಿಯಾದ ಕ್ರಮವಾಗಿದೆ ಎಂದು ಅವರು ಹೇಳಿದರು.

"ರಾಹುಲ್‌ ವಿದೇಶದಲ್ಲಿರುವಾಗ ಆಗಾಗ ಭಾರತದ ವಿರುದ್ಧ ಮಾತನಾಡುತ್ತಾರೆ,"ಎಂದು ಅಠಾವಳೆ ಹೇಳಿದರು.

"ರಾಹುಲ್‌ ಅವರು ಕಾಂಗ್ರೆಸ್‌ ನಾಯಕ, ಹಿಂದೆ ಕಾಂಗ್ರೆಸ್‌ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾಗಿದ್ದರು. ಕಾಂಗ್ರೆಸ್‌ ಪಕ್ಷ ದೇಶವನ್ನು 60 ರಿಂದ 70 ವರ್ಷ ಆಳ್ವಿಕೆ ನಡೆಸಿದೆ, ಹಾಗಿರುವಾಗ ವಿದೇಶಕ್ಕೆ ಹೋಗಿ ನಂತರ ದೇಶದ ವಿರುದ್ಧ ಮಾತನಾಡುವುದು ಸರಿಯಲ್ಲ ಎಂದು ಅವರಿಗೆ ತಿಳಿದಿರಬೇಕಿತ್ತು," ಎಂದು ಅಠಾವಳೆ ಹೇಳಿದರು.

"ನಮ್ಮ ಪ್ರಜಾಪ್ರಭುತ್ವ ಶಕ್ತಿಯುತವಾಗಿದೆ ಹೀಗಿರುವಾಗ ರಾಹುಲ್‌ ಅವರು ಲಂಡನ್‌ಗೆ ಹೋಗಿ, ಭಾರತದಲ್ಲಿ ಪ್ರಜಾಪ್ರಭುತ್ವವಿಲ್ಲವೆಂದು ಹೇಳುವುದು ದೇಶಕ್ಕೆ ಮಾಡಿದ ಅವಮಾನ," ಎಂದು ಅವರು ಹೇಳಿದರು.

"ರಾಹುಲ್‌ ಕ್ಷಮೆಯಾಚಿಸಬೇಕಿತ್ತು, ಆದರೆ ಅವರು ತಮ್ಮ ನಿಲುವಿನಿಂದ ಹಿಂದೆ ಸರಿದಿರಲಿಲ್ಲ.  ಅವರು ಕ್ಷಮೆಕೋರಿದ್ದರೆ ಅವರು ಅನರ್ಹರಾಗಿರುತ್ತಿರಲಿಲ್ಲ. ಒಬ್ಬ ಸಂಸದ ದೇಶದ ವಿರುದ್ಧ ವಿದೇಶದಲ್ಲಿ ಮಾತನಾಡಿದರೆ ಅವರ ವಿರುದ್ಧ ಕ್ರಮಕೈಗೊಳ್ಳುವ ಅಧಿಕಾರ ಲೋಕಸಭಾ ಸ್ಪೀಕರ್‌ ಅವರಿಗಿದೆ. ಆದುದರಿಂದ ಓಂ ಬಿರ್ಲಾ ಅವರು ಸರಿಯಾದ ಮತ್ತು ಬಹಳಷ್ಟು ಅಗತ್ಯವಾದ ಕ್ರಮ ಕೈಗೊಂಡಿದ್ದಾರೆ,"ಎಂದು ಅಠಾವಳೆ ಹೇಳಿದರು.

Similar News