ಮಾ.26ರಂದು 124 ಕೋ.ರೂ. ವೆಚ್ಚದ ವಿದ್ಯುತ್ ಕಾಮಗಾರಿಗಳ ಉದ್ಘಾಟನೆ

Update: 2023-03-25 11:46 GMT

ಉಡುಪಿ, ಮಾ.25: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವತಿಯಿಂದ ಉಡುಪಿ ಜಿಲ್ಲೆಯಲ್ಲಿ ನೂತನವಾಗಿ ನಿರ್ಮಿಸಿರುವ 220/110/11ಕೆ.ವಿ. ಹೆಗ್ಗುಂಜೆ, 110/11ಕೆ.ವಿ. ಬೆಳ್ಮಣ್, 110/11ಕೆ.ವಿ. ಬೆಳಪು ಉಪ ವಿದ್ಯುತ್ ಕೇಂದ್ರ ಹಾಗೂ ಇತರ ಕಾಮಗಾರಿಗಳ ಅನಾವರಣ ಕಾರ್ಯಕ್ರಮ ಮಾ.26ರಂದು ಬೆಳಗ್ಗೆ 9.30ಕ್ಕೆ ನಡೆಯಲಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಗಮದ ಉಡುಪಿ ಬಹೃತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಭಾರತಿ, ಜಿಲ್ಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಸಮಗ್ರ ಕಾಮಗಾರಿಗಳನ್ನು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಉಡುಪಿ ಕುಂಜಿಬೆಟ್ಟು ಕರ್ನಾಟಕ ವಿದ್ಯುಚ್ಛಕ್ತಿ ನೌಕರರ ಸಭಾಭವನ ದಲ್ಲಿ ಉದ್ಘಾಟಿಸಲಿರುವರು. ಸಚಿವರಾದ ಶೋಭಾ ಕರಂದ್ಲಾಜೆ, ಎಸ್.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ ಭಾಗವಹಿಸಲಿರುವರು ಎಂದರು.

ಕಳೆದ 20ವರ್ಷಗಳಿಂದ ಕೇಮಾರು ಉಪಕೇಂದ್ರ ಒಂದರಿಂದಲೇ ಉಡುಪಿ ಮತ್ತು ದ.ಕ. ಜಿಲ್ಲೆಗಳಿಗೆ ವಿದ್ಯುತ್ ವಿತರಣೆ ಆಗುತ್ತಿತ್ತು. ಈ ಒಂದೇ ಉಪ ಕೇಂದ್ರವನ್ನು ಅವಲಂಬಿಸಿರುವುದರಿಂದ ಇಲ್ಲಿ ತಾಂತ್ರಿಕ ಸಮಸ್ಯೆಗಳು ಕಂಡು ಬಂದರೆ ಎರಡು ಜಿಲ್ಲೆಗಳಲ್ಲಿ ವಿದ್ಯುತ್ ಅಡಚರಣೆ ಆಗುತ್ತಿತ್ತು. ಇದೀಗ ಹೆಗ್ಗುಂಜೆಯಲ್ಲಿ ಹೊಸ ಉಪಕೇಂದ್ರ ನಿರ್ಮಾಣ ಆಗಿರುವುದರಿಂದ ಕೇಮಾರು ಕೇಂದ್ರದಲ್ಲಿ ಸಮಸ್ಯೆಯಾದರೂ ಹೆಗ್ಗುಂಜೆ ಕೇಂದ್ರದ ಮೂಲಕ ಎರಡು ಜಿಲ್ಲೆ ಗಳಿಗೂ ವಿದ್ಯುತ್ ಸರಬರಾಜು ಮಾಡಬಹುದಾಗಿದೆಂದು ಅವರು ತಿಳಿಸಿದರು.

ಹೆಗ್ಗುಂಜೆ ಉಪಕೇಂದ್ರವನ್ನು 86.52 ಕೋಟಿ ರೂ., ಬೆಳ್ಮಣ್ 8.79ಕೋಟಿ ರೂ., ಬೆಳಪು 13.12ಕೋಟಿ ರೂ. ಮತ್ತು ಮಣಿಪಾಲ, ಕುಂದಾಪುರ, ಮಧುವನ ಹೆಚ್ಚುವರಿ ಪರಿವರ್ತಕಗಳ ಕಾಮಗಾರಿ, ನಿಟ್ಟೂರು, ಹಿರಿಯಡ್ಕ ಪರಿವರ್ತಕಗಳ ಸಾಮರ್ಥ್ಯ ವೃದ್ಧಿ ಕಾಮಗಾರಿಗಳು ಸೇರಿದಂತೆ ಎಲ್ಲ ಕಾಮಗಾರಿ ಗಳನ್ನು ಒಟ್ಟು 124.72ಕೋಟಿ ರೂ. ವೆಚ್ಚದಲ್ಲಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ನಿಗಮದ ಕಾರ್ಯಪಾಲಕ ಇಂಜಿನಿಯರ್‌ಗಳಾದ ಗಂಗಾಧರ ಕೆ., ಶ್ರೀನಿವಾಸ ಉಪಸ್ಥಿತರಿದ್ದರು.

Similar News