ಟೋಲ್‌ ಪ್ಲಾಝಾಗಳಿಗೆ ಬದಲಿಯಾಗಿ ಜಿಪಿಎಸ್‌ ಆಧಾರಿತ ಟೋಲ್‌ ವ್ಯವಸ್ಥೆ 6 ತಿಂಗಳಲ್ಲಿ ಜಾರಿ : ಗಡ್ಕರಿ

Update: 2023-03-25 12:18 GMT

 ಹೊಸದಿಲ್ಲಿ: ಈಗ ಅಸ್ತಿತ್ವದಲ್ಲಿರುವ ಹೆದ್ದಾರಿ ಟೋಲ್‌ ಪ್ಲಾಝಾಗಳ ಸ್ಥಾನದಲ್ಲಿ ಜಿಪಿಎಸ್‌ ಆಧಾರಿತ ಟೋಲ್‌ ಸಂಗ್ರಹ ವ್ಯವಸ್ಥೆ ಸಹಿತ ಹೊಸ ತಂತ್ರಜ್ಞಾನಗಳನ್ನು ಸರ್ಕಾರ ಮುಂದಿನ ಆರು ತಿಂಗಳಲ್ಲಿ ಜಾರಿಗೊಳಿಸಲಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ಹೆದ್ದಾರಿಯಲ್ಲಿ ವಾಹನ ದಟ್ಟಣೆಯನ್ನು ಕಡಿಮೆಗೊಳಿಸಲು ಹಾಗೂ ವಾಹನಗಳಿಗೆ ಅವುಗಳು ಹೆದ್ದಾರಿಯಲ್ಲಿ ಕ್ರಮಿಸಿದ ದೂರದ ಆಧಾರದಲ್ಲಿ ಶುಲ್ಕ ವಿಧಿಸುವ ಉದ್ದೇಶವನ್ನು ಈ ಕ್ರಮ ಹೊಂದಿದೆ ಎಂದು ಅವರು ಹೇಳಿದ್ದಾರೆ.

ಕೈಗಾರಿಕೆಗಳ ಸಂಸ್ಥೆ ಸಿಐಐ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಗಡ್ಕರಿ,  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಸಕ್ತ ಟೋಲ್‌ ಮೂಲಕ ರೂ 40,000 ಕೋಟಿ ಆದಾಯ ಗಳಿಸುತ್ತಿದೆ ಹಾಗೂ ಮುಂದಿನ ಎರಡು ಮೂರು ವರ್ಷಗಳಲ್ಲಿ ಈ ಮೊತ್ತ ರೂ 1.40 ಲಕ್ಷ ಕೋಟಿಗೆ ಏರಲಿದೆ ಎಂದು ಹೇಳಿದರು.

ಹೆದ್ದಾರಿ ಸಚಿವಾಲಯವು ಈಗಗಲೇ  ಸ್ವಯಂಚಾಲಿತ ನಂಬರ್‌ ಪ್ಲೇಟ್‌ ಗುರುತಿಸುವಿಕೆ ವ್ಯವಸ್ಥೆ (ಸ್ವಯಂಚಾಲಿತ ನಂಬರ್‌ ಪ್ಲೇಟ್‌ ರೀಡರ್‌ ಕ್ಯಾಮರಾ) ಕುರಿತಂತೆ ಪ್ರಾಯೋಗಿಕ ಯೋಜನೆ ಕೈಗೆತ್ತಿಕೊಂಡಿದೆ ಹಾಗೂ  ಇದು ವಾಹನಗಳನ್ನು ನಿಲ್ಲಿಸದೆ ಸ್ವಯಂಚಾಲಿತ ಟೋಲ್‌ ಸಂಗ್ರಹಿಸುತ್ತದೆ.

2018-19 ರಲ್ಲಿ ಟೋಲ್‌ ಪ್ಲಾಝಾದಲ್ಲಿ ಕಾಯುವ ಸರಾಸರಿ ಸಮಯ 8 ನಿಮಿಷಗಳಾಗಿದ್ದರೆ, ಫಾಸ್ಟ್ಯಾಗ್‌ಗಳ ಜಾರಿಯಿಂದ 2020-21 ಮತ್ತು 2021-22 ರಲ್ಲಿ ಈ ಸಮಯ 47 ಸೆಕೆಂಡ್‌ಗಳಿಗೆ ಇಳಿಕೆಯಾಗಿದೆ.

Similar News