ಕಾಯಕ ಶುದ್ಧಿಯಿಂದ ಆತ್ಮ ಶುದ್ಧಿ : ಜಿಲ್ಲಾಧಿಕಾರಿ ಕೂರ್ಮಾರಾವ್

Update: 2023-03-26 12:04 GMT

ಉಡುಪಿ : ವ್ಯಕ್ತಿಗಳು ತಾವು ಮಾಡುವ ಕಾಯಕವನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಮಾಡುವುದರ ಮೂಲಕ ಮನಸ್ಸು ಮತ್ತು ಆತ್ಮವನ್ನು ಶುದ್ಧಿ ಮಾಡಿಕೊಳ್ಳಬಹುದು ಎಂಬ ದೇವರ ದಾಸಿಮಯ್ಯ ಸಂದೇಶ ಎಲ್ಲ ಕಾಲಕ್ಕೂ ಸಲ್ಲುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಎಂ. ಹೇಳಿದ್ದಾರೆ.

ಅವರು ಇಂದು ರಜತಾದ್ರಿಯ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಶ್ರೀದೇವರ ದಾಸಿಮಯ್ಯ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಪ್ರತಿಯೊಬ್ಬರೂ ತಾವು ಮಾಡುವ ಕೆಲಸವನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಮಾಡುವುದರ ಮೂಲಕ ಅಭಿವೃದ್ಧಿ ಹೊಂದುವುದರ ಜೊತೆಗೆ ನೆಮ್ಮದಿಯ ಜೀವನ ಸಾಗಿಸಬಹುದು. ಈ ನಿಟ್ಟಿನಲ್ಲಿ ದೇವರ ದಾಸಿಮಯ್ಯ ಅವರು ಕಾಯಕ ಶ್ರದ್ಧೆ ಮತ್ತು ವಚನಗಳ ಮೂಲಕ ನೀಡಿರುವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ದೈನಂದಿನ ಬದುಕಿನಲ್ಲಿ ಅದರಂತೆ ನಡೆಯಬೇಕು ಎಂದರು.

ದೇವರ ದಾಸಿಮಯ್ಯ ಕುರಿತು ಉಪನ್ಯಾಸ ನೀಡಿದ ಗಿರೀಶ್ ಶೆಟ್ಟಿಗಾರ್, ಆದ್ಯ ವಚನಕಾರರೆಂದು ಕರೆಯುವ ದೇವರ ದಾಸಿಮಯ್ಯ ಅವರು, ಸಮಾಜ ದಲ್ಲಿನ ಮೂಡನಂಬಿಕೆಗಳು ಮತ್ತು ಜನರಲ್ಲಿನ ಅಜ್ಞಾನವನ್ನು ತೊಡೆದು ಹಾಕಲು ಪ್ರಯತ್ನಿಸಿದ್ದರು. ಮನುಷ್ಯ ಜೀವನದಲ್ಲಿ ಬರುವ ಯಾವುದೇ ಅಡೆ ತಡೆಗಳಿಗೆ ಎದೆಗುಂದದೆ ಶಾಂತ ಚಿತ್ತದಿಂದ ದೃಢವಾಗಿ ಅವುಗಳನ್ನು ಎದುರಿಸಿದರೆ ಜೀವನ ಸುಗಮವಾಗಲಿದೆ. ಮನಃಶುದ್ಧಿಯಿಂದ ತಮಗೆ ಬಂದಿರುವ ಕಾಯಕವನ್ನು ಮಾಡಿದರೆ ದೇವರು ಒಲಿಯುತ್ತಾನೆ ಎಂದು ಪ್ರತಿಪಾದಿಸಿದ ಅವರು, ರಾಮ ನಾಥ ಎಂಬ ಅಂಕಿತನಾಮದಿಂದ ಸುಮಾರು 150 ಕ್ಕೂ ಅಧಿಕ ವಚನಗಳನ್ನು ರಚಿಸಿದ್ದಾರೆ ಎಂದರು.

ತರಬೇತಿ ನಿರತ ಐಎಎಸ್ ಅಧಿಕಾರಿ ಯತೀಶ್, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್., ಜಿಲ್ಲಾ ಜವಳಿ ಮತ್ತು ಕೈಮಗ್ಗ ಇಲಾಖೆಯ ಸಹಾಯಕ ನಿರ್ದೇಶಕ ಶಿವಶಂಕರ್, ದಕ್ಷಿಣಕನ್ನಡ ಪದ್ಮಶಾಲಿ ಸಂಘದ ಅಧ್ಯಕ್ಷ ರಾಮದಾಸ ಶೆಟ್ಟಿಗಾರ್, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಲಕ್ಷ್ಮಣ ಕೊಡಿಯಾಲಬೈಲು, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ನಾಮ ನಿರ್ದೇಶಿತ ಸದಸ್ಯ ಮಾದವ ಶೆಟ್ಟಿಗಾರ್ ಕೆರೆಕಾಡು, ಉಡುಪಿ ಪ್ರಾಥಮಿಕ ನೇಕಾರರ ಸಹಕಾರ ಸಂಘದ ಅಧ್ಯಕ್ಷ ರತ್ನಾಕರ ಇಂದ್ರಾಳಿ ಮೊದಲಾದವರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ನಮ್ಮ ಭೂಮಿಯ ರಾಮಾಂಜಿ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

Similar News