ನಾಗರಿಕ ಸೇವಾ ನೇಮಕಾತಿ ಪ್ರಕ್ರಿಯೆ ಅವಧಿ ಕಡಿಮೆಗೊಳಿಸಲು ಯುಪಿಎಸ್ಸಿಗೆ ಸಂಸತ್ ಸಮಿತಿ ಸೂಚನೆ

Update: 2023-03-26 17:15 GMT

ಹೊಸದಿಲ್ಲಿ, ಮಾ.26: ಕೇಂದ್ರ ನಾಗರಿಕ ಸೇವಾ ಹುದ್ದೆಗಳ ನೇಮಕಾತಿಗೆ ನಡೆಸಲಾಗುವ 15 ತಿಂಗಳುಗಳ ಸುದೀರ್ಘ ಅವಧಿಯ ಪರೀಕ್ಷಾ ಪ್ರಕ್ರಿಯೆಯು ಅಭ್ಯರ್ಥಿಗಳ ಅಮೂಲ್ಯವಾದ ವರ್ಷಗಳನ್ನು ವ್ಯರ್ಥಮಾಡುವುದರ ಜೊತೆಗೆ ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೂ ಗಂಭೀರವಾದ ಪರಿಣಾಮವನ್ನುಂಟು ಮಾಡುತ್ತದೆ ಎಂದು ಸಂಸದೀಯ ಸಮಿತಿ ಆತಂಕ ವ್ಯಕ್ತಪಡಿಸಿದೆ. ನಾಗರಿಕ ಸೇವಾ ನೇಮಕಾತಿ ಪ್ರಕ್ರಿಯೆಯ ಅವಧಿಯಲ್ಲಿ ಇಳಿಕೆ ಮಾಡುವಂತೆ ಯುಪಿಎಸ್ಸಿಗೆ ಅದು ಸೂಚಿಸಿದೆ.

ನಾಗರಿಕ ಸೇವಾ ಪರೀಕ್ಷೆಗೆ ಕಡಿಮೆ ಸಂಖ್ಯೆಯ ಅಭ್ಯರ್ಥಿಗಳು ಹಾಜರಾಗುತ್ತಿರುವುದಕ್ಕೆ ಕಾರಣಗಳನ್ನು ಹುಡುಕುವಂತೆಯೂ ಸಮಿತಿಯು ಯುಪಿಎಸ್ಸಿಗೆ ಸೂಚಿಸಿದೆ.

ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ವಿದೇಶಾಂಗ ಸೇವೆ (ಐಎಫ್ಎಸ್) ಹಾಗೂ ಭಾರತೀಯ ಪೊಲೀಸ್ ಸೇವೆ (ಐಪಿಎಸ್ )ಗೆ ಅಧಿಕಾರಿಗಳ ಆಯ್ಕೆಗಾಗಿ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯನ್ನು ವಾರ್ಷಿಕವಾಗಿ ಪ್ರಾಥಮಿಕ, ಮುಖ್ಯ ಹಾಗೂ ಸಂದರ್ಶನ ಹೀಗೆ ಮೂರು ಹಂತಗಳಲ್ಲಿ ನಡೆಸುತ್ತದೆ.

ಯುಪಿಎಸ್ಸಿ ಒದಗಿಸಿರುವ ದತ್ತಾಂಶಗಳ ಪ್ರಕಾರ ಅಧಿಸೂಚನೆಯನ್ನು ಹೊರಡಿಸುವುದರಿಂದ ಹಿಡಿದು ಅಂತಿಮ ಫಲಿತಾಂಶದ ಘೋಷಣೆಯವರೆಗೆ ನಾಗರಿಕ ಸೇವಾ ಪರೀಕ್ಷೆಗೆ ತೆಗೆದುಕೊಳ್ಳುವ ಸರಾಸರಿ ಅವಧಿಯು 15 ತಿಂಗಳುಗಳಾಗಿರುತ್ತವೆ ಎಂದು ಸಿಬ್ಬಂದಿ, ಸಾರ್ವಜನಿಕ ಅಹವಾಲುಗಳು, ಕಾನೂನು ಹಾಗೂ ನ್ಯಾಯ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಒದಗಿಸಿದ ದತ್ತಾಂಶಗಳಿಂದ ತಿಳಿದುಬಂದಿದೆ.

ಯಾವುದೇ ನೇಮಕಾತಿ ಪರೀಕ್ಷೆಗೆ ತಗಲುವ ಅವಧಿಯು ಸಾಮಾನ್ಯವಾಗಿ ಆರು ತಿಂಗಳುಗಳನ್ನು ಮೀರಕೂಡದು ಎಂಬ ಅಭಿಪ್ರಾಯವನ್ನು ಸಮಿತಿಯು ಹೊಂದಿದೆ. ದೀರ್ಘಾವಧಿಯ ನೇಮಕಾತಿ ಪರೀಕ್ಷಾ ಪ್ರಕ್ರಿಯೆಗಳು ಅಭ್ಯರ್ಥಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಗಂಭೀವಾದ ಪರಿಣಾಮ ಬೀರುತ್ತದೆ. ಆ ಪ್ರಕಾರ ಗುಣಮಟ್ಟದ ಜೊತೆ ರಾಜಿ ಮಾಡಿಕೊಳ್ಳದೆ ನೇಮಕಾತಿಯ ಆವರ್ತನದ ಅವಧಿಯನ್ನು ಕಡಿಮೆಗೊಳಿಸುವಂತೆ ಸಮಿತಿಯು ಶಿಫಾರಸು ಮಾಡಿರುವುದಾಗಿ ವರದಿ ತಿಳಿಸಿದೆ.

2022-23ನೇ ಸಾಲಿನಲ್ಲಿ ಆಯೋಜಿಸಲಾದ ಯುಪಿಎಸ್ಸಿ ಪರೀಕ್ಷೆಗಳಿಗಾಗಿ 32.39 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಆದರೆ ಅವರಲ್ಲಿ ಕೇವಲ 16.82 ಲಕ್ಷ ಅಭ್ಯರ್ಥಿಗಳು (51.85 ಶೇ.) ಮಾತ್ರವೇ ಪರೀಕ್ಷೆಗೆ ಹಾಜರಾಗಿದ್ದರು.

Similar News