210 ದಿನಗಳಲ್ಲಿ ಗರಿಷ್ಠ ಮಟ್ಟ ತಲುಪಿದ ಕೋವಿಡ್ ಸೋಂಕು

Update: 2023-03-27 02:10 GMT

ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಸೋಂಕು ಮತ್ತು ಸಾವಿನ ಪ್ರಕರಗಳು ಏರಿಕೆಯಾಗುತ್ತಿದ್ದು, ಶನಿವಾರ 1890 ಹೊಸ ಪ್ರಕರಣಗಳು ವರದಿಯಾಗಿವೆ. ಇದು 210 ದಿನಗಳಲ್ಲೇ ಗರಿಷ್ಠ. ಹಿಂದಿನ ವಾರಕ್ಕೆ ಹೋಲಿಸಿದರೆ ಕಳೆದ ಒಂದು ವಾರದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಶೇಕಡ 78ರಷ್ಟು ಏರಿಕೆಯಾಗಿದ್ದು, ಇಪ್ಪತ್ತೊಂಬತ್ತು ಮಂದಿ ಸೋಂಕಿತರು ಈ ಅವಧಿಯಲ್ಲಿ ಮೃತಪಟ್ಟಿದ್ದಾರೆ. ಹಿಂದಿನ ವಾರ 19 ಮಂದಿ ಸೋಂಕಿಗೆ ಬಲಿಯಾಗಿದ್ದರು.

2022ರ ಅಕ್ಟೊಬರ್ 22ರಂದು 1988 ಪ್ರಕರಣಗಳು ವರದಿಯಾಗಿದ್ದವು. ಆ ಬಳಿಕ ಶನಿವಾರ ದಾಖಲಾದ ಪ್ರಕರಣಗಳು ಗರಿಷ್ಠ ಎನಿಸಿವೆ. ಮಾರ್ಚ್ 19-25ರ ಅವಧಿಯಲ್ಲಿ ದೇಶಾದ್ಯಂತ ಒಟ್ಟು 8781 ವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ. ಇದು ಹಿಂದಿನ ಏಳು ದಿನಗಳ ಅವಧಿಯಲ್ಲಿ ವರದಿಯಾದ 4929 ಪ್ರಕರಣಗಳಿಗೆ ಹೋಲಿಸಿದರೆ ಶೇಕಡ 78ರಷ್ಟು ಅಧಿಕ. ಅದಕ್ಕೂ ಹಿಂದಿನ ವಾರ ಒಟ್ಟು ಪ್ರಕರಣಗಳ ಸಂಖ್ಯೆ ಶೇಕಡ 85ರಷ್ಟು ಹೆಚ್ಚಿತ್ತು. ಕಳೆದ ಆರು ವಾರಗಳಿಂದ ಸತತವಾಗಿ ದೇಶದಲ್ಲಿ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ.

ಕಳೆದ ವಾರಾಂತ್ಯದಲ್ಲಿ ಇದ್ದ ಪ್ರಮಾಣದಲ್ಲೇ ದೈನಿಕ ಪ್ರಕರಣಗಳು ಸುಮಾರು ಎಂಟು ದಿನಗಳಲ್ಲಿ ದ್ವಿಗುಣಗೊಳ್ಳುತ್ತಿವೆ. ಏಳು ದಿನಗಳ ಸರಾಸರಿ ಪ್ರಕರಣಗಳ ಸಂಖ್ಯೆ ಶನಿವಾರ 1254ಕ್ಕೇರಿದೆ. ಎಂಟು ದಿನಗಳ ಹಿಂದೆ ಈ ಪ್ರಮಾಣ 626 ಆಗಿತ್ತು.

ಸತತ ಎರಡನೇ ವಾರ ಮಹಾರಾಷ್ಟ್ರ ಗರಿಷ್ಠ ಪ್ರಕರಣಗಳನ್ನು ದಾಖಲಿಸಿದೆ. ರಾಜ್ಯದಲ್ಲಿ 1956 ಹೊಸ ಪ್ರಕರಣಗಳ ವರದಿಯಾಗಿದ್ದು, ಹರ್ಯಾಣ, ದೆಹಲಿ, ಉತ್ತರಪ್ರದೇಶ, ಹಿಮಾಚಲ ಪ್ರದೇಶ ಮತ್ತು ಗೋವಾದಲ್ಲಿ ತೀಕ್ಷ್ಣ ಏರಿಕೆಯೊಂದಿಗೆ ದೇಶಾದ್ಯಂತ ಬಹುತೇಕ ಎಲ್ಲ ರಾಜ್ಯಗಳಲ್ಲಿ ಪ್ರಕರಣಗಳು ಹೆಚ್ಚುತ್ತಿವೆ.

Similar News