ನನ್ನ ಹೆಸರು ಸಾವರ್ಕರ್ ಅಲ್ಲ, ಕ್ಷಮೆಯಾಚಿಸುವುದಿಲ್ಲ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಉದ್ಧವ್ ಠಾಕ್ರೆ ಅಸಮಾಧಾನ

Update: 2023-03-27 04:55 GMT

ಹೊಸದಿಲ್ಲಿ/ಮುಂಬೈ: ಸಂಸದ ಸ್ಥಾನದಿಂದ ಅನರ್ಹಗೊಂಡ ನಂತರ ರಾಹುಲ್ ಗಾಂಧಿಯವರ "ನನ್ನ ಹೆಸರು ಸಾವರ್ಕರ್ ಅಲ್ಲ, ಕ್ಷಮೆಯಾಚಿಸುವುದಿಲ್ಲ" ಎಂಬ ಹೇಳಿಕೆಯಿಂದ ಅಸಮಾಧಾನಗೊಂಡಿರುವ ಶಿವಸೇನೆ ನಾಯಕ  ಉದ್ಧವ್ ಠಾಕ್ರೆ ಅವರು ಈ ರೀತಿಯ ಹೇಳಿಕೆಯ ಮೂಲಕ "ನಮ್ಮ ದೇವರನ್ನು ಅವಮಾನಿಸುವುದನ್ನು ನಿಲ್ಲಿಸದಿದ್ದರೆ’’ ಮಹಾರಾಷ್ಟ್ರ ವಿರೋಧ ಪಕ್ಷದ ಮೈತ್ರಿಯಲ್ಲಿ ಬಿರುಕು" ಕಾಣಬಹುದು ಎಂದು ಎಚ್ಚರಿಸಿದ್ದಾರೆ.

"ನಾವು ಒಟ್ಟಾಗಿ ಬಂದಿದ್ದೇವೆ, ಅದು ಸರಿ, ಈ ದೇಶದಲ್ಲಿ ಪ್ರಜಾಪ್ರಭುತ್ವ ಹಾಗೂ  ಸಂವಿಧಾನವನ್ನು ಉಳಿಸಲು ನಾವು ಒಟ್ಟಾಗಿದ್ದೇವೆ ಎಂದು ನಾನು ರಾಹುಲ್ ಗಾಂಧಿಗೆ ಹೇಳಲು ಬಯಸುತ್ತೇನೆ, ಆದರೆ ಬಿರುಕುಗಳನ್ನು ಸೃಷ್ಟಿಸುವ ಯಾವುದೇ ಹೇಳಿಕೆಗಳನ್ನು ನೀಡಬೇಡಿ. ಅವರು (ಬಿಜೆಪಿ) ನಿಮ್ಮನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ. ನಾವು ಈ ಸಮಯವನ್ನು ತಪ್ಪಿಸಿಕೊಂಡರೆ, ನಮ್ಮ ದೇಶವು ಖಂಡಿತವಾಗಿಯೂ ನಿರಂಕುಶಾಧಿಕಾರದತ್ತ ಸಾಗುತ್ತದೆ" ಎಂದು ಉದ್ಧವ್ ಠಾಕ್ರೆ ಹೇಳಿದರು.

ಕಾಂಗ್ರೆಸ್ ಮತ್ತು ಉದ್ಧವ್ ಠಾಕ್ರೆ ಅವರ ಶಿವಸೇನೆ, ಎನ್‌ಸಿಪಿ ಜೊತೆಗೆ 2019 ರಲ್ಲಿ ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರಕಾರವನ್ನು ರಚಿಸಿದಾಗಿನಿಂದ ಮೈತ್ರಿ ಕೂಟದಲ್ಲಿದೆ. ಶಿವಸೇನೆಯಲ್ಲಿನ ದಂಗೆಯ ನಂತರ ಉದ್ಧವ್ ಠಾಕ್ರೆ ಅವರ ಸರಕಾರ ಉರುಳಿಬಿದ್ದು  ಬಂಡಾಯ ನಾಯಕ ಏಕನಾಥ್  ಶಿಂಧೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದ ನಂತರವೂ ಮೈತ್ರಿ ಕೂಟದಲ್ಲಿ ಠಾಕ್ರೆ ನೇತೃತ್ವದ ಶಿವಸೇನೆ ಉಳಿದಿದೆ.

ಕಳೆದ ವರ್ಷ ಭಾರತ್ ಜೋಡೋ ಯಾತ್ರೆಯಲ್ಲಿ ಹಿಂದೂ ವಿಚಾರವಾದಿ ವಿನಾಯಕ್ "ವೀರ್" ಸಾವರ್ಕರ್ ಅವರನ್ನು ರಾಹುಲ್ ಗಾಂಧಿ ಟೀಕಿಸಿದ್ದು ಕಾಂಗ್ರೆಸ್ ಹಾಗೂ  ಉದ್ಧವ್ ಠಾಕ್ರೆ ಪಕ್ಷದ ನಡುವೆ ಬಿರುಕು ಮೂಡಿಸಿತ್ತು. ಮಿತ್ರಪಕ್ಷಗಳು ಆ ಸಮಯದಲ್ಲಿ ಭಿನ್ನಾಭಿಪ್ರಾಯಗಳನ್ನು ಸುಗಮಗೊಳಿಸಿದವು, ಠಾಕ್ರೆ ಅವರ ಪ್ರಮುಖ ಆಪ್ತ  ಸಂಜಯ್ ರಾವುತ್ ಅವರು ರಾಹುಲ್ ಗಾಂಧಿಯವರ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದರು.

ಬ್ರಿಟನ್‌ನಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಅಥವಾ ನ್ಯಾಯಾಲಯದಲ್ಲಿ ಶಿಕ್ಷೆಗೆ ಕಾರಣವಾದ "ಮೋದಿ ಉಪನಾಮ" ಹೇಳಿಕೆಗಾಗಿ ಕ್ಷಮೆಯಾಚಿಸಲು ನಿರಾಕರಿಸಿದ ಬಗ್ಗೆ ರಾಹುಲ್ ಗಾಂಧಿ ಬಳಿ ಕೇಳಿದಾಗ, ಅವರು: "ನನ್ನ ಹೆಸರು ಸಾವರ್ಕರ್ ಅಲ್ಲ. ನನ್ನ ಹೆಸರು ಗಾಂಧಿ ಮತ್ತು ಗಾಂಧಿ ಕ್ಷಮೆ ಕೇಳುವುದಿಲ್ಲ. ಎಂದಿದ್ದರು.

ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ  ನೀಡಿರುವ ಉದ್ಧವ್ ಠಾಕ್ರೆ ಅವರು ಸಾವರ್ಕರ್ ಅವರನ್ನು ನಾನು ಆದರ್ಶವ್ಯಕ್ತಿ ಎಂದು  ಪರಿಗಣಿಸಿದ್ದೇನೆ. ಕಾಂಗ್ರೆಸ್ ನಾಯಕರು ಅವರನ್ನು ಅವಮಾನಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.

Similar News