×
Ad

ಕುಂಭಾಶಿಯಲ್ಲಿ ಸರಣಿ ಅಪಘಾತ: ಓರ್ವ ಯುವಕ ಮೃತ್ಯು, ಇನ್ನೋರ್ವ ಗಂಭೀರ

Update: 2023-03-27 12:19 IST

ಕುಂದಾಪುರ, ಮಾ.27: ಕಾರು, ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಓರ್ವ ಯುವಕ ಮೃತಪಟ್ಟು, ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಕುಂಭಾಶಿಯಲ್ಲಿ ರವಿವಾರ ಮಧ್ಯಾಹ್ನ ನಡೆದಿದೆ.

ಕುಂಭಾಶಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಳೆಕಟ್ಟು ಸಮೀಪದ ನಿವಾಸಿ ಪ್ರಶಾಂತ್(25) ಮೃತಪಟ್ಟವರು. ಸಹಸವಾರ ವಿಘ್ನೇಶ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಶಾಂತ್ ಹಾಗೂ ಸ್ನೇಹಿತನಾಗಿರುವ ವಿಘ್ನೇಶ್ ಕೆಲಸದ ನಿಮಿತ್ತ ಕುಂಭಾಶಿಯಿಂದ ಕುಂದಾಪುರ ಕಡೆಗೆ ಹೋಗುವಾಗ ಈ ಅಪಘಾತ ಸಂಭವಿಸಿದೆ. ಕುಂಭಾಶಿ ಬೀಚ್ ರಸ್ತೆಯಿಂದ ಬಂದ ಕಾರು ಏಕಾಏಕಿಯಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂದಾಪುರ ಕಡೆಗೆ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಈ ವೇಳೆ ಅದೇ ರಸ್ತೆಯಲ್ಲಿ ಬಂದ ಖಾಸಗಿ ಬಸ್ ಅಪಘಾತಕ್ಕೀಡಾದ ಕಾರು ಮತ್ತು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಬೈಕ್, ಕಾರು ಜಖಂಗೊಂಡಿದ್ದರೆ, ಬಸ್ಸಿನ ಮುಂಭಾಗಕ್ಕೂ ಹಾನಿಯಾಗಿದೆ.

ಘಟನಾ ಸ್ಥಳಕ್ಕೆ ಕುಂದಾಪುರ ಸಂಚಾರಿ ಠಾಣಾಧಿಕಾರಿ ನಾಸಿರ್ ಹುಸೇನ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Similar News