ಕರ್ನಾಟಕ ರಾಜಕೀಯ ಸಮಾವೇಶಗಳಲ್ಲಿ ಉಳಿಕೆಯಾದ ಆಹಾರ ಸೇವಿಸಿ 22 ದನಗಳ ಸಾವು

Update: 2023-03-27 15:55 GMT

ಯಾದಗಿರಿ: ಜೆಡಿಎಸ್ ಆಯೋಜಿಸಿದ್ದ ಸಮಾವೇಶ ಮುಕ್ತಾಯದ ನಂತರ ಉಳಿದಿದ್ದ ಆಹಾರವನ್ನು ಸೇವಿಸಿ 15 ದನಗಳು ಸಾವಿಗೀಡಾಗಿರುವ ಘಟನೆ ಮಾರ್ಚ್ 25ರಂದು ನಡೆದಿದೆ. ಇದೇ ತಿಂಗಳ ಆರಂಭದಲ್ಲೂ ಇಂತಹದೇ ಘಟನೆ ವರದಿಯಾಗಿತ್ತು ಎಂದು indianexpress.com ವರದಿ ಮಾಡಿದೆ.

ಈ ಒಂದು ತಿಂಗಳ ಅವಧಿಯಲ್ಲಿ ರಾಜಕೀಯ ಪಕ್ಷಗಳು ಆಯೋಜಿಸಿದ್ದ ಸಮಾವೇಶಗಳ ಮುಕ್ತಾಯದ ನಂತರ ಉಳಿದಿದ್ದ ಆಹಾರವನ್ನು ಸೇವಿಸಿ ಯಾದಗಿರಿ ಹಾಗೂ ರಾಯಚೂರಿನಲ್ಲಿ ಒಟ್ಟು 22 ದನಗಳು ಸಾವಿಗೀಡಾಗಿವೆ ಎಂದು ವರದಿ ಉಲ್ಲೇಖಿಸಿದೆ.

ಯಾದಗಿರಿ ಜಿಲ್ಲೆಯ ಯೆರ್ಗೋಲ್ ಗ್ರಾಮದಲ್ಲಿ ಮಾರ್ಚ್ 25ರಂದು 15 ದನಗಳು ಸಾವಿಗೀಡಾಗಿರುವುದು ಕಂಡು ಬಂದಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪಶು ಸಂಗೋಪನಾ ಅಧಿಕಾರಿಗಳಿಗೆ, ಜೆಡಿಎಸ್ ಸಮಾವೇಶದಲ್ಲಿನ ಉಳಿಕೆ ಆಹಾರವನ್ನು ಸೇವಿಸಿ ಆ ದನಗಳು ಸಾವಿಗೀಡಾಗಿವೆ ಎಂಬ ಸಂಗತಿ ತಿಳಿದು ಬಂದಿದೆ.

"ಗುರುಮಿಠ್ಕಲ್ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಸಂಭವನೀಯ ಅಭ್ಯರ್ಥಿಯಾಗಿರುವ ಶರಣಗೌಡ ಕಂದಕೂರ್ ಅವರು ಮಾರ್ಚ್ 24ರಂದು ಚುನಾವಣಾ ಸಮಾವೇಶವನ್ನು ಆಯೋಜಿಸಿದ್ದರು. ಅದೇ ದಿನ ಸಂಜೆ ಆ ಗ್ರಾಮದ 30-35 ದನಗಳು ಸಮಾವೇಶದಲ್ಲಿ ಉಳಿಕೆಯಾಗಿದ್ದ ಅನ್ನವನ್ನು ಸೇವಿಸಿದ್ದವು. ಶನಿವಾರ ಬೆಳಗ್ಗೆ ದನಗಳಿಗಾಗಿ ಹುಡುಕಿಕೊಂಡು ಹೋದ ಗ್ರಾಮಸ್ಥರಿಗೆ ದನಗಳು ಹೊಟ್ಟೆ ಊದಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿವೆ. ಕೂಡಲೇ ಗ್ರಾಮಸ್ಥರು ಪಶು ಸಂಗೋಪನಾ ಇಲಾಖೆಗೆ ಮಾಹಿತಿ ನೀಡಿದರು" ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕರಾದ ರಾಜು ದೇಶ್‌ಮುಖ್ ಅವರು, "ದನಗಳು ಜೀರ್ಣ ಕ್ರಿಯೆಯ ಆಮ್ಲೀಕರಣದಿಂದ ಸಾವಿಗೀಡಾಗಿವೆ. ಮರಣೋತ್ತರ ಪರೀಕ್ಷೆಯ ಪ್ರಕಾರ, ದನಗಳು ಕಾರ್ಬೊಹೈಡ್ರೇಟ್ ಪ್ರಮಾಣ ಹೊಂದಿರುವ ಆಹಾರವನ್ನು ಹೇರಳವಾಗಿ ಸೇವಿಸಿವೆ. ದನಗಳು ಹೇರಳ ಪ್ರಮಾಣದ ಅನ್ನ ಸೇವಿಸಿರುವುದರಿಂದ ಮರಣ ಸಂಭವಿಸಿದೆ" ಎಂದು Indian Express ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಪಶು ಸಂಗೋಪನಾ ಇಲಾಖೆಯ ಅಧಿಕಾರಿಯೊಬ್ಬರು, "ಈ ಪ್ರಕರಣವು ಆಹಾರ ನಂಜಿನ ಸ್ಪಷ್ಟ ಪ್ರಕರಣವಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ದನಗಳು 5-6 ಕೆಜಿಯಷ್ಟು ಹಳಸಿದ ಅನ್ನವನ್ನು ಸೇವಿಸಿದ್ದು, ಇದೇ ಸಾವಿಗೆ ಕಾರಣವಾಗಿರಬಹುದು. ದೊಡ್ಡ ಪ್ರಮಾಣದ ಆಹಾರವನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡಿರುವುದರಿಂದ ಗ್ರಾಮಸ್ಥರಿಗೆ ಆ ಸ್ಥಳವನ್ನು ಚೊಕ್ಕಟಗೊಳಿಸುವಂತೆ ಸೂಚಿಸಲಾಗಿದೆ" ಎಂದು ತಿಳಿಸಿದ್ದಾರೆ.

ಇದೇ ಬಗೆಯ ಘಟನೆಯೊಂದು ಮಾರ್ಚ್ 10ರಂದು ರಾಯಚೂರಿನ ಗುಂಜಲಿ ಗ್ರಾಮದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಸಮಾವೇಶದಲ್ಲೂ ನಡೆದು, ಏಳು ದನಗಳು ಮೃತಪಟ್ಟಿದ್ದವು.

ಈ ಕುರಿತು ಪ್ರತಿಕ್ರಿಯಿಸಿರುವ ರಾಯಚೂರು ಬಿಜೆಪಿಯ ಜಿಲ್ಲಾಧ್ಯಕ್ಷ ರಮಾನಂದ ಯಾದವ್, "ದನಗಳು ಆಹಾರ ನಂಜಿನಿಂದ ಮೃತಪಟ್ಟಿದ್ದು, ಪಕ್ಷವು ದನಗಳ ಮಾಲಕರನ್ನು ಸಂಪರ್ಕಿಸಿದೆ. ನಮಗೆ ಘಟನೆಯ ಕುರಿತು ತಿಳಿಯಿತು ಮತ್ತು ನಾವು ರೈತರಿಗೆ ಪರಿಹಾರ ಒದಗಿಸಿದ್ದೇವೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತೇವೆ" ಎಂದು ಭರವಸೆ ನೀಡಿದ್ದಾರೆ.

Similar News