ರಾಷ್ಟ್ರಪತಿಯ ಅನುಮೋದನೆ ದೊರೆಯದಿದ್ದರೂ ಅಲ್ಪಸಂಖ್ಯಾತರ ಸಹಕಾರಿ ಸಂಘಗಳಿಗೆ ಆಡಳಿತಾಧಿಕಾರಿ ನೇಮಕಕ್ಕೆ ಪ್ರಸ್ತಾವ

ವಿವಾದಕ್ಕೆ ಗ್ರಾಸವಾದ ಸಹಕಾರ ಇಲಾಖೆಯ ಕ್ರಮ

Update: 2023-03-28 05:02 GMT

ಬೆಂಗಳೂರು: ಅಲ್ಪಸಂಖ್ಯಾತರ ಸಂಘಗಳಿಗೂ ಆಡಳಿತಾಧಿಕಾರಿಯ ನೇಮಕ ಸಂಬಂಧ ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960ರ ಕಲಂ 27(ಎ)ಗೆ ತಿದ್ದುಪಡಿ ವಿಧೇಯಕಕ್ಕೆ ಇನ್ನೂ ರಾಷ್ಟ್ರಪತಿಯ ಅನುಮೋದನೆ ದೊರಕದಿದ್ದರೂ, ಸಹಕಾರ ಇಲಾಖೆಯು ಅಲ್ಪಸಂಖ್ಯಾತರ ಸಂಘ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಕ ಮಾಡುವ ಪ್ರಸ್ತಾವಗಳನ್ನು ಸರಕಾರಕ್ಕೆ ಸಲ್ಲಿಸುತ್ತಿರುವುದು ಬಹಿರಂಗವಾಗಿದೆ.

ಅಲ್ಪಸಂಖ್ಯಾತರ ಸಂಘ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ಅವಕಾಶ ಸಂವಿಧಾನ ಬಾಹಿರ ಎಂದು ಕರ್ನಾಟಕ ಹೈಕೋರ್ಟ್ 1987ರಲ್ಲೇ ಹೊರಡಿಸಿರುವ ಆದೇಶವನ್ನು ಸರಿಪಡಿಸುವ ಹೆಸರಿನಲ್ಲಿ ಕರ್ನಾಟಕ ಸೊಸೈಟಿಗಳ ನೋಂದಣಿ (ತಿದ್ದುಪಡಿ) 27 (ಎ)ಗೆ ತಿದ್ದುಪಡಿ ವಿಧೇಯಕಕ್ಕೆ ವಿಧಾನಮಂಡಲದ ಉಭಯ ಸದನಗಳು ಒಪ್ಪಿಗೆ ನೀಡಿವೆ. ಆದರೆ, ಇದುವರೆಗೂ ರಾಷ್ಟ್ರಪತಿಗಳ ಅನುಮೋದನೆ ದೊರಕಿಲ್ಲ. ಈ ಸಂಬಂಧ ಕೆಲವು ಟಿಪ್ಪಣಿ ಹಾಳೆಗಳು "the-file.in"ಗೆ ಲಭ್ಯವಾಗಿವೆ.

ಬೆಂಗಳೂರಿನ ಸಿ ಆ್ಯಂಡ್ ಐಜಿಎಂ ಮಿಸ್ಪಾ ತೆಲುಗು ಚರ್ಚ್ ಸಂಘದಲ್ಲಿ ಕಾಲಕಾಲಕ್ಕೆ ಲೆಕ್ಕಪತ್ರಗಳನ್ನು ಸಲ್ಲಿಸಿಲ್ಲ ಎಂಬುದೂ ಸೇರಿದಂತೆ ಈ ಸಂಘದ ವಿರುದ್ಧ ಹಲವು ದೂರಿನ ಅರ್ಜಿಗಳು ಸಹಕಾರ ಸಂಘಗಳ ನಿಬಂಧಕರಿಗೆ ಸಲ್ಲಿಕೆಯಾಗಿವೆ.

ಈ  ಅರ್ಜಿಗಳನ್ನಾಧರಿಸಿ ಆಡಳಿತಾಧಿಕಾರಿ ನೇಮಕಗೊಳಿಸುವ ಪ್ರಸ್ತಾವ ಸಂಬಂಧ ಕಾನೂನು ಇಲಾಖೆ ಅಭಿಪ್ರಾಯ ಕೋರಿರುವುದು ತಿಳಿದು ಬಂದಿದೆ.

ಆಡಳಿತ ಇಲಾಖೆಯು ಕರ್ನಾಟಕ ಹೈಕೋರ್ಟ್ ರಿಟ್ ಅರ್ಜಿ ಸಂಖ್ಯೆ 15753/1983ರಲ್ಲಿ ನೀಡಿರುವ ಆದೇಶವು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆಯೇ ಅಥವಾ ಅಲ್ಪಸಂಖ್ಯಾತ ಸಂಘಗಳಿಗೂ ಅನ್ವಯಿಸುತ್ತದೇ ಎಂಬ ಬಗ್ಗೆ ಮತ್ತು ಸಿ ಆ್ಯಂಡ್ ಐಜಿಎಂ ಮಿಸ್ಪಾ ತೆಲುಗು ಚರ್ಚ್ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಬಹುದೇ ಎಂದು ಸಹಕಾರ ಇಲಾಖೆಯು ಕಾನೂನು ಇಲಾಖೆಗೆ ಅಭಿಪ್ರಾಯ ಕೋರಿ ಕಡತ ಮಂಡಿಸಿತ್ತು.

ಇದೇ ಕಡತಲ್ಲಿ ಅಲ್ಪಸಂಖ್ಯಾತ ಸಂಘಗಳಿಗೂ ಆಡಳಿತಾಧಿಕಾರಿ ನೇಮಿಸಲು ಅನುವಾಗುವಂತೆ ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960ರ ಕಲಂ 27(ಎ)ಗೆ ತಿದ್ದುಪಡಿ ತರಲು ಪ್ರಸ್ತಾವನೆ ಮಂಡಿಸಿದ್ದು, ಉಭಯ ಸದನಗಳಲ್ಲಿ ಅನುಮೋದನೆಗೊಂಡಿರುತ್ತದೆ. ಅನುಮೋದಿತ ಮಸೂದೆಯನ್ನು ರಾಷ್ಟ್ರಪತಿಯವರ ಅನುಮೋದನೆಗೆ ಮಂಡಿಸಲಾಗಿರುತ್ತದೆ. ಹಾಗೂ ಇದುವರೆಗೂ ಮಸೂದೆಯು ರಾಷ್ಟ್ರಪತಿಯವರ ಅನುಮೋದನೆ ಆಗಿರುವುದಿಲ್ಲ ಎಂದೂ ಆಡಳಿತ ಇಲಾಖೆಯಾದ ಸಹಕಾರ ಇಲಾಖೆಯು ತಿಳಿಸಿರುವುದು ಗೊತ್ತಾಗಿದೆ.

ರಾಷ್ಟ್ರಪತಿಯವರ ಸಹಮತಿ ನಂತರವೇ ಈ ವಿಧೇಯಕವು ಕಾನೂನಿನ ರೂಪ ಪಡೆಯುತ್ತದೆ. ತಿದ್ದುಪಡಿ ಪ್ರಸ್ತಾವದ ವಿಧೇಯಕಕ್ಕೆ ರಾಷ್ಟ್ರಪತಿಯವರ ಅಂಕಿತ ಪಡೆದುಕೊಂಡ ದಿನದಂದು ಕಾನೂನಿನ ಘೋಷಣೆಯಾಗುತ್ತದೆ. ರಾಷ್ಟ್ರಪತಿಯವರ ಅನುಮೋದನೆಗಾಗಿ ಬಾಕಿ ಇಟ್ಟಿದ್ದರೂ ವಿಧೇಯಕಕ್ಕೆ ರಾಷ್ಟ್ರಪತಿಯವರ ಅಂಕಿತವಾದ ನಂತರವಷ್ಟೇ ವಿಧೇಯಕ ಕಾನೂನಿನ ರೂಪ ಪಡೆಯುತ್ತದೆ ಎಂಬ ಅಂಶವನ್ನು ಕಾನೂನು ಇಲಾಖೆಯು ತನ್ನ ಅಭಿಪ್ರಾಯದಲ್ಲಿ ತಿಳಿಸಿದೆ.

 ಈ ಹಿನ್ನೆಲೆಯಲ್ಲಿ ಸಿ ಆ್ಯಂಡ್ ಐಜಿಎಂ ಮಿಸ್ಪಾ ತೆಲುಗು ಚರ್ಚ್ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಲು ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960ರ ಕಲಂ 27(ಎ)ಗೆ ತಿದ್ದುಪಡಿ ನಂತರ ಕ್ರಮವಹಿಸಬಹುದಾಗಿದೆ ಎಂದೂ ಕಾನೂನು ಇಲಾಖೆಯು ಅಭಿಪ್ರಾಯ ನೀಡಿರುವುದು ತಿಳಿದು ಬಂದಿದೆ.

ಸಾಮಾನ್ಯ ಸೊಸೈಟಿಗಳು ಮತ್ತು ಅಲ್ಪಸಂಖ್ಯಾತ ಸೊಸೈಟಿಗಳ ನಡುವಿನ ತಾರತಮ್ಯವನ್ನು ತೊಡೆದು ಹಾಕುವ ಉದ್ದೇಶವನ್ನು ಮುಂದಿರಿಸಿರುವ ರಾಜ್ಯ ಬಿಜೆಪಿ ಸರಕಾರವು ಸಂವಿಧಾನಕ್ಕೆ ವಿರುದ್ಧವಾಗಿ ಅಲ್ಪಸಂಖ್ಯಾತ ಸಂಘ ಸಂಸ್ಥೆಗಳನ್ನು ಕೈವಶ ಮಾಡಿಕೊಳ್ಳಲು ಹೊರಟಿದೆ ಎಂಬ ಅಭಿಪ್ರಾಯ ಕೇಳಿ ಬಂದಿತ್ತು.

ಲೋಪಗಳನ್ನು ಮುಂದಿರಿಸಿ ಅಲ್ಪಸಂಖ್ಯಾತರ ಸಂಘ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ಪ್ರಸ್ತಾವ ಹೊಂದಿರುವ ತಿದ್ದುಪಡಿ ವಿಧೇಯಕದ ಮುಖಾಂತರ ಎಲ್ಲ ಸಹಕಾರ ಸಂಘ ಸಂಸ್ಥೆಗಳನ್ನು ಇಲ್ಲಿ ಒಟ್ಟುಗೂಡಿಸಲು ಹೊರಟಿರುವ ಸರಕಾರ ಮತ್ತೊಂದು ತಪ್ಪುಹೆಜ್ಜೆಯನ್ನಿರಿಸಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

ಅಲ್ಪಸಂಖ್ಯಾತ ಸಂಘ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ಅವಕಾಶ ಸಂವಿಧಾನ ಬಾಹಿರ ಎಂದು ಕರ್ನಾಟಕ ಹೈಕೋರ್ಟ್ 1987ರಲ್ಲೇ ಹೊರಡಿಸಿರುವ ಆದೇಶವನ್ನು ಸರಿಪಡಿಸುವ ಹೆಸರಿನಲ್ಲಿ ಕರ್ನಾಟಕ ಸೊಸೈಟಿಗಳ ನೋಂದಣಿ (ತಿದ್ದುಪಡಿ) 27 (ಎ)ಗೆ ತಿದ್ದುಪಡಿ ತರಲು ಪ್ರಸ್ತಾಪಿಸಿತ್ತು.

ವಿಧೇಯಕದ ಉದ್ದೇಶವೇನು?

ಸಾಮಾನ್ಯ ಸೊಸೈಟಿಗಳು ಮತ್ತು ಅಲ್ಪಸಂಖ್ಯಾತ ಸೊಸೈಟಿಗಳ ನಡುವಿನ ತಾರತಮ್ಯವನ್ನು ತೊಡೆದು ಹಾಕಲು ಮತ್ತು ಮತ್ತಷ್ಟು ವ್ಯಾಜ್ಯಗಳನ್ನು ತಪ್ಪಿಸಲು, ಸರಕಾರದ ಸೊಸೈಟಿಯ ಸದಸ್ಯರ ಮತ್ತು ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶವು ವಿಧೇಯಕದಲ್ಲಿದೆ ಎಂದು ಸರಕಾರ ಹೇಳಿದೆ.

Similar News