ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಕರೆಗಳು: ಬೆಳಗಾವಿ ಜೈಲಿನಿಂದ ಶಂಕಿತನನ್ನು ವಶಕ್ಕೆ ತೆಗೆದುಕೊಂಡ ನಾಗ್ಪುರ ಪೊಲೀಸರು

Update: 2023-03-28 15:32 GMT

ನಾಗ್ಪುರ (ಮಹಾರಾಷ್ಟ್ರ), ಮಾ.28: ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ ಎರಡು ಬಾರಿ ಮಾಡಲಾಗಿದ್ದ ಬೆದರಿಕೆ ಕರೆಗಳಿಗೆ ಸಂಬಂಧಿಸಿದಂತೆ ನಾಗ್ಪುರ ಪೊಲೀಸರು ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಯನ್ನು ಜಯೇಶ ಪೂಜಾರಿ ಅಲಿಯಾಸ್ ಜಯೇಶ ಕಾಂತ ಎಂದು ಗುರುತಿಸಲಾಗಿದ್ದು,ಆತನನ್ನು ಬೆಳಗಾವಿಯ ಹಿಂಡಲಗಾ ಜೈಲಿನಿಂದ ವಶಕ್ಕೆ ತೆಗೆದುಕೊಂಡು ಮಂಗಳವಾರ ಬೆಳಿಗ್ಗೆ ವಿಮಾನದ ಮೂಲಕ ನಾಗ್ಪುರಕ್ಕೆ ತರಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

ನಗರದ ಧಂತೋಲಿ ಪೊಲೀಸ್ ಠಾಣೆಯಲ್ಲಿ ಪೂಜಾರಿ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. ಕೇಂದ್ರ ಸಚಿವರಿಗೆ ಬೆದರಿಕೆ ಕರೆಗಳನ್ನು ಮಾಡಿರುವುದರ ಹಿಂದಿನ ಉದ್ದೇಶವನ್ನು ತಿಳಿದುಕೊಳ್ಳಲು ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಅಧಿಕಾರಿ ತಿಳಿಸಿದರು.

ಜ.14ರಂದು ನಾಗ್ಪುರದಲ್ಲಿಯ ಗಡ್ಕರಿಯವರ ಸಾರ್ವಜನಿಕ ಸಂಪರ್ಕ ಕಚೇರಿಗೆ ಕರೆಯನ್ನು ಮಾಡಿದ್ದ ತನ್ನನ್ನು ಜಯೇಶ ಪೂಜಾರಿ ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿ 100 ಕೋ.ರೂ.ಗಳಿಗೆ ಬೇಡಿಕೆಯಿಟ್ಟಿದ್ದ. ಹಣವನ್ನು ನೀಡದಿದ್ದರೆ ಗಡ್ಕರಿಯವರ ಕೊಲೆಯನ್ನು ಮಾಡುವುದಾಗಿ ಬೆದರಿಕೆಯೊಡ್ಡಿದ್ದ ಆತ  ತಾನು ದಾವೂದ್ ಇಬ್ರಾಹಿಂ ಗ್ಯಾಂಗಿನ ಸದಸ್ಯ ಎಂದೂ  ಹೇಳಿಕೊಂಡಿದ್ದ.

ಮಾರ್ಚ 21ರಂದು ಮತ್ತೊಮ್ಮೆ ಸಚಿವರ ಕಚೇರಿಗೆ ಕರೆ ಮಾಡಿ, 10 ಕೋ.ರೂ.ಗಳನ್ನು ಪಾವತಿಸದಿದ್ದರೆ ಗಡ್ಕರಿಯವರಿಗೆ ಹಾನಿಯನ್ನುಂಟು ಮಾಡುವುದಾಗಿ ಬೆದರಿಕೆಯೊಡ್ಡಿದ್ದ ಎಂದು ಪೊಲೀಸರು ತಿಳಿಸಿದರು. ಬೆದರಿಕೆ ಕರೆಗಳ ಬಳಿಕ ನಾಗ್ಪುರದಲ್ಲಿಯ ಸಚಿವರ ನಿವಾಸ ಮತ್ತು ಕಚೇರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕೊಲೆ ಪ್ರಕರಣದಲ್ಲಿ ಮರಣ ದಂಡನೆಗೆ ಗುರಿಯಾಗಿರುವ ಪೂಜಾರಿ, ಬೆದರಿಕೆ ಕರೆಗಳಲ್ಲಿ ತನ್ನ ಕೈವಾಡವನ್ನು ನಿರಾಕರಿಸಿದ್ದಾನೆ.

Similar News