ಕಸ್ಟಡಿ ಸಾವಿನ ಪ್ರಕರಣ: ಮಾಜಿ ಐಪಿಎಸ್ ಸಂಜೀವ್ ಭಟ್ ಅರ್ಜಿಗೆ ಉತ್ತರಿಸುವಂತೆ ಗುಜರಾತಿಗೆ ಸುಪ್ರೀಂ ಸೂಚನೆ

Update: 2023-03-28 17:05 GMT

ಹೊಸದಿಲ್ಲಿ, ಮಾ.28: ವಜಾಗೊಂಡಿರುವ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರು ಸಲ್ಲಿಸಿರುವ ಅರ್ಜಿಗೆ ಉತ್ತರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಗುಜರಾತ್ ಸರಕಾರಕ್ಕೆ ನಿರ್ದೇಶನ ನೀಡಿದೆ. 1990ರ ಕಸ್ಟಡಿ ಸಾವಿನ ಪ್ರಕರಣದಲ್ಲಿ ತನ್ನ ದೋಷನಿರ್ಣಯದ ವಿರುದ್ಧ ಗುಜರಾತ್ ಉಚ್ಚ ನ್ಯಾಯಾಲಯದಲ್ಲಿ ತಾನು ಸಲ್ಲಿಸಿರುವ ಮೇಲ್ಮನವಿಯನ್ನು ಬೆಂಬಲಿಸಲು ಹೆಚ್ಚುವರಿ ಪುರಾವೆಗಳನ್ನು ಒದಗಿಸಲು ಅನುಮತಿಯನ್ನು ಕೋರಿ ಭಟ್ ಈ ಅರ್ಜಿಯನ್ನು ಸಲ್ಲಿಸಿದ್ದಾರೆ.

ಕೋಮು ದಂಗೆಯ ಬಳಿಕ ಜಾಮನಗರ ಪೊಲೀಸರಿಂದ ಬಂಧಿಸಲ್ಪಟಿದ್ದ ಪ್ರಭುದಾಸ ವೈಷ್ಣನಿಯ ಕಸ್ಟಡಿ ಸಾವಿನಲ್ಲಿ ತನ್ನ ದೋಷನಿರ್ಣಯವನ್ನು ಪ್ರಶ್ನಿಸಿ ಭಟ್ ಗುಜರಾತ್ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಆ ಸಂದರ್ಭದಲ್ಲಿ ಭಟ್ ಜಾಮನಗರದ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿದ್ದರು.

ಹಿರಿಯ ವಕೀಲ ಮಣಿಂದರ್ ಸಿಂಗ್ ಅವರು ಈಗಾಗಲೇ ರಾಜ್ಯದ ಪರವಾಗಿ ಹಾಜರಾಗಿದ್ದಾರೆ,ಹೀಗಾಗಿ ವಿಧ್ಯುಕ್ತ ನೋಟಿಸನ್ನು ಹೊರಡಿಸುವ ಅಗತ್ಯವಿಲ್ಲ ಎಂದು ಹೇಳಿದ ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಸಿ.ಟಿ.ರವಿಕುಮಾರ್ ಅವರ ಪೀಠವು,ಎ.11ರೊಳಗೆ ತನ್ನ ಉತ್ತರವನ್ನು ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿ,ವಿಚಾರಣೆಯನ್ನು ಎ.18ಕ್ಕೆ ಮುಂದೂಡಿತು.

ಕಸ್ಟಡಿ ಸಾವಿನ ಪ್ರಕರಣದಲ್ಲಿ ನ್ಯಾಯಾಲಯವು ಜೂನ್ 2019ರಲ್ಲಿ ಭಟ್ ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು.

Similar News