ರಾಹುಲ್ ಗಾಂಧಿ ಕಾಂಗ್ರೆಸ್ ಪಿತೂರಿಯ ಬಲಿಪಶುವೇ?: ಕೇಂದ್ರ ಸಚಿವ ಅನುರಾಗ್ ಠಾಕೂರ್ ಪ್ರಶ್ನೆ

Update: 2023-03-29 08:48 GMT

ಹೊಸ ದಿಲ್ಲಿ: ಮಾನನಷ್ಟ ಪ್ರಕರಣದಲ್ಲಿ ದೋಷಿಯಾಗಿ, ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡಿರುವ ರಾಹುಲ್ ಗಾಂಧಿ ಅವರ ನೆರವಿಗೆ ಕಾಂಗ್ರೆಸ್ ಪಕ್ಷದ ಯಾವುದೇ ಪರಿಣತ ವಕೀಲರು ಯಾಕೆ ನೆರವಿಗೆ ಬರಲಿಲ್ಲ ಎಂದು ಪ್ರಶ್ನಿಸಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್, ಇದು ಪಕ್ಷದೊಳಗಿನ ಉದ್ದೇಶಪೂರಿತ ಹಾಗೂ ಪಿತೂರಿಯ ಭಾಗವಾಗಿ ನಡೆದಿರುವಂತೆ ಕಾಣುತ್ತಿದೆ ಎಂದು ಶಂಕಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

"Times Network India Digital Fest" ಅನ್ನು ಉದ್ದೇಶಿಸಿ ಮಾತನಾಡಿದ ಅನುರಾಗ್ ಠಾಕೂರ್, ರಾಹುಲ್ ಗಾಂಧಿ ಸರಣಿ ತಪ್ಪಿತಸ್ಥ ಎಂದು ಬಣ್ಣಿಸಿದ್ದು, ಸುಪ್ರೀಂಕೋರ್ಟ್‌ನಿಂದ ಎಚ್ಚರಿಕೆಗೊಳಗಾಗಿದ್ದರೂ ಹಲವಾರು ನ್ಯಾಯಾಲಯಗಳಲ್ಲಿ ಏಳು ಮಾನನಷ್ಟ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರ ಲೋಕಸಭಾ ಸದಸ್ಯತ್ವದ ಅನರ್ಹತೆಯಲ್ಲಿ ಸರ್ಕಾರ ಅಥವಾ ಲೋಕಸಭಾ ಕಾರ್ಯಾಲಯದ ಯಾವುದೇ ಪಾತ್ರವಿಲ್ಲ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವರೂ ಆದ ಅನುರಾಗ್ ಠಾಕೂರ್ ಸ್ಪಷ್ಟಪಡಿಸಿದ್ದಾರೆ. ಜನಪ್ರತಿನಿಧಿ ಕಾಯ್ದೆಯನ್ವಯ ಮಾನನಷ್ಟ ಪ್ರಕರಣದಲ್ಲಿ ಎರಡು ವರ್ಷ ಶಿಕ್ಷೆಗೊಳಗಾದ ಕೂಡಲೇ ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವ ಅನರ್ಹಗೊಂಡಿತು ಎಂದು ಅವರು ಹೇಳಿದ್ದಾರೆ.

ರಾಹುಲ್ ಗಾಂಧಿ ಸುಪ್ರೀಂಕೋರ್ಟ್‌ಗೆ ಲಿಖಿತ ಕ್ಷಮಾಪಣಾ ಪತ್ರ ಸಲ್ಲಿಸಿದ್ದರೂ, ಅವರು ಸಮುದಾಯಗಳು, ವ್ಯಕ್ತಿಗಳು ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದಂಥ ಸಂಸ್ಥೆಗಳ ಬಗ್ಗೆ ಮಾನನಷ್ಟ ಹೇಳಿಕೆ ನೀಡುವುದನ್ನು ಮುಂದುವರಿಸಿದ್ದಾರೆ ಎಂದು ಅನುರಾಗ್ ಠಾಕೂರ್ ಕಿಡಿ ಕಾರಿದ್ದಾರೆ.

ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರೊಂದಿಗೆ ಕಟುವಾಗಿ ವರ್ತಿಸಿದ ರಾಹುಲ್ ಗಾಂಧಿ ನಡವಳಿಕೆಯನ್ನೂ ಅವರು ಟೀಕಿಸಿದ್ದಾರೆ.

Similar News