ರಾಷ್ಟ್ರಗೀತೆಗೆ ಅಗೌರವ ಪ್ರಕರಣ: ಮಮತಾ ಬ್ಯಾನರ್ಜಿಗೆ ಯಾವುದೇ ವಿನಾಯಿತಿ ನೀಡಲು ನಿರಾಕರಿಸಿದ ಹೈಕೋರ್ಟ್

Update: 2023-03-29 09:07 GMT

ಮುಂಬೈ: 2022ರಲ್ಲಿ ಮುಂಬೈನಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದರೆಂದು ಮಮತಾ ಬ್ಯಾನರ್ಜಿ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಅವರಿಗೆ ಯಾವುದೇ ವಿನಾಯಿತಿ ನೀಡಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ ಎಂದು ndtv.com ವರದಿ ಮಾಡಿದೆ.

ಜನವರಿ 2023ರಲ್ಲಿ ಪ್ರಕರಣದ ವಿಚಾರಣೆಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವರ್ಗಾಯಿಸಿದ ಸೆಷನ್ಸ್ ಕೋರ್ಟ್ ಆದೇಶ ಹಾಗೂ ಸಮನ್ಸ್ ನೀಡಿಕೆಯ ವಿಷಯವನ್ನು ಪ್ರಶ್ನಿಸಿ ಮಮತಾ ಬ್ಯಾನರ್ಜಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾ. ಅಮಿತ್ ಬೋರ್ಕರ್ ನೇತೃತ್ವದ ಏಕಸದಸ್ಯ ಪೀಠವು ವಜಾಗೊಳಿಸಿತು.

ಸೆಷನ್ಸ್ ನ್ಯಾಯಾಲಯವು ಸಮನ್ಸ್  ರದ್ದುಗೊಳಿಸಿ ಹಾಗೂ ವಿಚಾರಣೆಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವರ್ಗಾಯಿಸುವ ಬದಲು ಇಡೀ ದೂರನ್ನೇ ರದ್ದು ಮಾಡಬೇಕಿತ್ತು ಎಂದು ಮಮತಾ ಬ್ಯಾನರ್ಜಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಹೀಗಿದ್ದೂ ಸೆಷನ್ಸ್ ನ್ಯಾಯಾಲಯದ ತೀರ್ಪು ಕಾನೂನಿಗೆ ವಿರುದ್ಧ ಇರುವುದನ್ನು ಗಣನೆಗೆ ತೆಗೆದುಕೊಂಡ ನ್ಯಾ. ಬೋರ್ಕರ್, ಈ ವಿಷಯದಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಮುಂಬೈನ ಕುಫ್ಫೆ ಪೆರೇಡ್ ಮೈದಾನದಲ್ಲಿನ ಯಶವಂತರಾವ್ ಚವಾಣ್ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿ ರಾಷ್ಟ್ರಗೀತೆಯನ್ನು ಕುಳಿತ ಭಂಗಿಯಲ್ಲೇ ಹಾಡಿದ್ದಾರೆ ಮತ್ತು ಕೆಲ ಹೊತ್ತಿನ ನಂತರ ಕುರ್ಚಿಯಿಂದ ಮೇಲೆದ್ದು ಕೆಲವು ಸಾಲುಗಳನ್ನು ಏಕಾಏಕಿ ನಿಲ್ಲಿಸಿ, ಕಾರ್ಯಕ್ರಮ ಸ್ಥಳದಿಂದ ನಿರ್ಗಮಿಸಿದ್ದಾರೆ ಎಂದು ಹೋರಾಟಗಾರರಾದ ವಿವೇಕಾನಂದ ಗುಪ್ತ ಎಂಬುವವರು ದೂರು ದಾಖಲಿಸಿದ್ದರು. ಈ ದೂರನ್ನು ಆಧರಿಸಿ ಮಾರ್ಚ್ 2022ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮಮತಾ ಬ್ಯಾನರ್ಜಿಗೆ ಸಮನ್ಸ್ ಜಾರಿಗೊಳಿಸಿತ್ತು.

Similar News