2,000 ರೂ.ಗೂ ಹೆಚ್ಚಿನ UPI ವ್ಯಾಪಾರಿ ಪಾವತಿಗಳಿಗೆ ಎ.1ರಿಂದ ಶುಲ್ಕ ಅನ್ವಯ

Update: 2023-03-29 16:05 GMT

ಹೊಸದಿಲ್ಲಿ: ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ)ವು ಎಪ್ರಿಲ್ 1ರಿಂದ ಮರ್ಚಂಟ್ (ವ್ಯಾಪಾರಿ) ಯುಪಿಐ ವಹಿವಾಟುಗಳಿಗೆ ಶೇ.1.1ರವರೆಗೆ ಇಂಟರ್‌ಚೇಂಜ್ ಶುಲ್ಕವನ್ನು ವಿಧಿಸಲಾಗುವುದು ಎಂದು ಪ್ರಕಟಿಸಿದೆ.

2,000 ರು.ಗಳಿಗೂ ಹೆಚ್ಚಿನ ಯುಪಿಐ ಮೂಲಕ ವಹಿವಾಟುಗಳಿಗೆ ಪ್ರಿಪೇಡ್ ಪಾವತಿ ಸಾಧನ (ಪಿಪಿಐ)ಗಳ ಬಳಕೆಗಾಗಿ ಇಂಟರ್‌ಚೇಂಜ್ ಶುಲ್ಕವನ್ನು ವಿಧಿಸಲಾಗುವುದು ಎಂದು ಎನ್‌ಪಿಸಿಐ ತನ್ನ ಇತ್ತೀಚಿನ ಸುತ್ತೋಲೆಯಲ್ಲಿ ತಿಳಿಸಿದೆ.

ವ್ಯಾಪಾರಿಗಳ ವಿವಿಧ ವರ್ಗಗಳಿಗೆ ಶೇ.0.5ರಿಂದ ಶೇ.1.1ರವರೆಗೆ ವಿಭಿನ್ನ ಇಂಟರ್‌ಚೇಂಜ್ ಶುಲ್ಕಗಳು ಅನ್ವಯಿಸಲಿವೆ ಮತ್ತು ಕೆಲವು ವರ್ಗಗಳಿಗೆ ಮಿತಿಯೂ ಅನ್ವಯಿಸಲಿದೆ. ಗ್ರಾಹಕರಿಗೆ ಶುಲ್ಕವಿರುವುದಿಲ್ಲ ಎಂದು ವರದಿಯಾಗಿದೆ.

ಪಿಪಿಐಗಳ ಮೂಲಕ ಮಾಡಲಾದ ವ್ಯಾಪಾರಿ ವಹಿವಾಟುಗಳಿಗೆ ಮಾತ್ರ ಈ ಶುಲ್ಕವು ಅನ್ವಯಿಸಲಿದೆ. ಯುಪಿಐ ಪಾವತಿ ಆಧಾರಿತ ಬ್ಯಾಂಕ್ ಖಾತೆಯಿಂದ ಬ್ಯಾಂಕ್ ಖಾತೆಗೆ ಮಾಡಲಾಗುವ ಸಾಮಾನ್ಯ ಯುಪಿಐ ವಹಿವಾಟುಗಳಿಗೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ಎನ್‌ಪಿಸಿಐ ಬುಧವಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದೆ.

ದೂರಸಂಪರ್ಕ,ಶಿಕ್ಷಣ ಮತ್ತು ಯುಟಿಲಿಟೀಸ್/ಪೋಸ್ಟ್ ಆಫೀಸ್‌ಗೆ ಇಂಟರ್‌ಚೇಂಜ್ ಶುಲ್ಕವು ಶೇ.0.7 ಆಗಿದ್ದರೆ ಸುಪರ್‌ಮಾರ್ಕೆಟ್‌ಗಳಿಗೆ ವಹಿವಾಟಿನ ಮೊತ್ತದ ಶೇ.0.9 ಆಗಿರುತ್ತದೆ. ವಿಮೆ,ಸರಕಾರ,ಮ್ಯೂಚ್ಯುವಲ್ ಫಂಡ್‌ಗಳು ಮತ್ತು ರೈಲ್ವೆಗೆ ಶೇ.1ರಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ. ಕೃಷಿಗೆ ಶೇ.0.7 ಮತ್ತು ಇಂಧನಕ್ಕೆ ಶೇ.0.5 ಶುಲ್ಕವನ್ನು ವಿಧಿಸಲಾಗುತ್ತದೆ.
ಈ ಶುಲ್ಕಗಳು ಎ.1ರಿಂದ ಅನ್ವಯಗೊಳ್ಳಲಿವೆ.

ಪಿಯರ್-ಟು-ಪಿಯರ್ (ಪಿ2ಪಿ) ಮತ್ತು ಪಿಯರ್-ಟು-ಪಿಯರ್-ಮರ್ಚಂಟ್ (ಪಿ2ಪಿಎಂ) ವಹಿವಾಟುಗಳಿಗೆ ಇಂಟರ್‌ಚೇಂಜ್ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಪಿಪಿಪಿ ವಿತರಕರು 2,000 ರೂ.ಗೂ ಹೆಚ್ಚಿನ ವಹಿವಾಟುಗಳಿಗೆ ರವಾನೆ ಬ್ಯಾಂಕುಗಳಿಗೆ ವ್ಯಾಲೆಟ್ ಲೋಡಿಂಗ್ ಶುಲ್ಕವಾಗಿ 15 ಮೂಲಾಂಶಗಳನ್ನು ಪಾವತಿಸುವುದು ಅಗತ್ಯವಾಗಲಿದೆ.

ಎನ್‌ಪಿಸಿಐ 2023,ಸೆ.1ರಂದು ಅಥವಾ ಅದಕ್ಕೂ ಮುನ್ನ ಶುಲ್ಕ ದರಗಳನ್ನು ಪುನರ್‌ಪರಿಶೀಲಿಸಲಿದೆ.

Similar News