ಉಡುಪಿ ಜಿಲ್ಲೆಯಲ್ಲಿ ಈ ವರ್ಷ 13,878 ಕೋಟಿ ರೂ. ಸಾಲ ವಿತರಿಸುವ ಗುರಿ: ಪ್ರಸನ್ನ ಎಚ್

ಲೀಡ್ ಬ್ಯಾಂಕ್ ಸಭೆ

Update: 2023-03-29 14:20 GMT

ಉಡುಪಿ, ಮಾ.29: ಜಿಲ್ಲೆಯಲ್ಲಿ 2023-24ನೇ ಸಾಲಿನ ಆರ್ಥಿಕ ವರ್ಷದಲ್ಲಿ ವಿವಿಧ ಬ್ಯಾಂಕ್‌ಗಳ ಮೂಲಕ ಒಟ್ಟು 13,878 ಕೋಟಿ ರೂ.  ಸಾಲ ವಿತರಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಪಂಚಾ ಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್. ಹೇಳಿದ್ದಾರೆ. 

ಮಣಿಪಾಲದಲ್ಲಿರುವ ಜಿಪಂನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಬ್ಯಾಂಕ್‌ ಗಳ ಪ್ರಗತಿ ಪರಿಶೀಲನಾ ಸಮಿತಿಯ (ಡಿಎಲ್‌ಆರ್) ಸಭೆಯಲ್ಲಿ  2023-24ನೇ ಸಾಲಿನ ಜಿಲ್ಲಾ ಸಾಲ ಯೋಜನೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.

2023-24ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಆದ್ಯತಾ ವಲಯಕ್ಕೆ 10,644 ಕೋಟಿ ರೂ., ಕೃಷಿ ಕ್ಷೇತ್ರಕ್ಕೆ 5,502 ಕೋಟಿ ರೂ. ಮೀಸಲಿರಿಸಲಾಗಿದೆ. ಇರುವ ಸಂಪನ್ಮೂಲಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡು ಆದ್ಯತಾ ವಲಯ ದಲ್ಲಿ ಶೇ.10.25ರ ಪ್ರಗತಿಯ ಗುರಿಯನ್ನು ಹಾಕಿ ಕೊಂಡಿದ್ದರೆ, ಕೃಷಿಯಲ್ಲಿ ಶೇ.5.80ರ ಪ್ರಗತಿಯನ್ನು ನಿರೀಕ್ಷಿಸಲಾಗಿದೆ ಎಂದು ಯೋಜನೆಯಲ್ಲಿ  ತಿಳಿಸಲಾಗಿದೆ.

ಜಿಲ್ಲೆಯಲ್ಲಿ ಕೈಗಾರಿಕಾ ಕ್ಷೇತ್ರಕ್ಕೆ ಉತ್ತೇಜನ ನೀಡಲು ಸೂಕ್ಷ್ಮ, ಸಣ್ಣ ಮತ್ತು ಅತಿ ಸಣ್ಣ ವಲಯಕ್ಕೆ ಒಟ್ಟು 3444.72 ಕೋಟಿ ರೂ. ಸಾಲ ಒದಗಿಸುವ  ಪ್ರಸ್ತಾಪವಿದೆ. ಅದೇ ರೀತಿ ಶಿಕ್ಷಣ ಕ್ಷೇತ್ರಕ್ಕೆ 190.06 ಕೋಟಿ ರೂ., ಸರಕಾರದ ಎಲ್ಲಾ ಯೋಜನೆಗಳಡಿ ವಸತಿ ಕ್ಷೇತ್ರಕ್ಕೆ 1063 ಕೋಟಿ ರೂ., 446 ಕೋಟಿ ರೂ.ಗಳನ್ನು ಇತರೇ ಆದ್ಯತಾ ವಲಯಗಳಿಗೆ ಸಾಲದ ರೂಪದಲ್ಲಿ ವಿತರಿಸಲು ಮೀಸಲಿಡಲಾಗಿದೆ.  

ಸಾಲ-ಠೇವಣಿ ಅನುಪಾತ ಇಳಿಮುಖ: ಜಿಲ್ಲೆಯ ಲೀಡ್ ಬ್ಯಾಂಕ್ ಆದ ಕೆನರಾ ಬ್ಯಾಂಕಿನ ಪ್ರಾದೇಶಿಕ ಮ್ಯಾನೇಜರ್ ಲೀನಾ ಪಿಂಟೊ ಅವರು 2022ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಂಡಂತೆ ಹಿಂದಿನ ಮೂರು ತಿಂಗಳ ಬ್ಯಾಂಕಿನ  ಸಾಧನೆಯ ವರದಿ ಮಂಡಿಸಿದರು. ಜಿಲ್ಲೆಯ ಬ್ಯಾಂಕುಗಳ ಒಟ್ಟು ವ್ಯವಹಾರ 50084 ಕೋಟಿಗೆ ಏರಿದ್ದು, ಡಿಸೆಂಬರ್ 2021ನೇ ಸಾಲಿಗೆ ಹೋಲಿಸಿದರೆ ಇದರಲ್ಲಿ 4379 ಕೋಟಿ ರೂ.ಗಳ (ಶೇ.9.58ರ) ಪ್ರಗತಿ ಸಾಧಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಬ್ಯಾಂಕುಗಳ ಠೇವಣಿ ಮೊತ್ತ 34,120 ಕೋಟಿ ರೂ.ಗಳಿ ಗೇರಿದರೆ, ಇದೇ ಅವಧಿಯಲ್ಲಿ  ನೀಡಿದ ಸಾಲದ ಮೊತ್ತ 15,964 ಕೋಟಿ ರೂ.ಗಳಾಗಿವೆ ಎಂದರು.  ಆದರೆ ಜಿಲ್ಲೆಯಲ್ಲಿ ಸಾಲ-ಠೇವಣಿಯ ಅನುಪಾತ ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.-1.14ರಷ್ಟು ಇಳಿದಿದೆ. 2021ರ ಡಿ.31ಕ್ಕೆ ಜಿಲ್ಲೆಯ ಸಿಡಿ ಅನುಪಾತ ಶೇ.47.22 ಆಗಿದ್ದರೆ, ಅದೇ 2022ರ ಸೆ.30ಕ್ಕೆ ಅದು 47.93 ಆಗಿತ್ತು. ಇದೀಗ ಡಿ.31ಕ್ಕೆ ಅದು 46.79ಕ್ಕೆ ಕುಸಿದಿದೆ.

ಪಿಎಂ ಸ್ವನಿಧಿ ರಾಜ್ಯಕ್ಕೆ ಪ್ರಥಮ: ಸರಕಾರದ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆಯ ಸಾಲ ವಿತರಣೆ ಯಲ್ಲಿ ಉಡುಪಿ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ಲೀನಾ ಪಿಂಟೊ ವಿವರಿಸಿದರು.

ಈ ಯೋಜನೆಯಲ್ಲಿ ಒಟ್ಟು 3049 ಮಂದಿಗೆ ಸಾಲ ನೀಡುವ ಗುರಿ ಇದ್ದು, ಈಗಾಗಲೇ 4550 ಮಂದಿಗೆ ಸಾಲ ವಿತರಣೆ ಮಾಡುವ ಮೂಲಕ ಶೇ.149 ರಷ್ಟು ಸಾಧನೆ ಮಾಡಲಾಗಿದೆ. ಬ್ಯಾಂಕ್‌ಗಳಲ್ಲಿ ಇನ್ನೂ ಬಾಕಿ ಇರುವ 616 ಅರ್ಜಿಗಳನ್ನು ಮಾರ್ಚ್ ಕೊನೆಯೊಳಗೆ ವಿಲೇವಾರಿ ಮಾಡುವಂತೆ ಸೂಚನೆ ನೀಡಿದರು.

ಪ್ರಧಾನ ಮಂತ್ರಿ ಉದ್ಯೋಗ ಸೃಜನಾ ಯೋಜನೆಯಡಿ 180 ಮಂದಿಗೆ ಸಾಲ ನೀಡುವ ಗುರಿ ಇದ್ದು, ಈವರೆಗೆ 472 ಮಂದಿಗೆ ಸಾಲ ವಿತರಿಸುವ ಮೂಲಕ ಶೇ.262ರಷ್ಟು ಸಾಧನೆ ಮಾಡಿದ್ದು, ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಳಿಕ ಉಡುಪಿ ರಾಜ್ಯದಲ್ಲೇ 2ನೇ ಸ್ಥಾನ ಪಡೆದಿದೆ ಎಂದರು.

ವಿವಿಧ ಯೋಜನೆಗಳಲ್ಲಿ ಸಾಲ ಕೋರಿ ಸಲ್ಲಿಕೆಯಾಗುವ ಫಲಾನುಭವಿಗಳ ಅರ್ಜಿಗಳನ್ನು ತಾಂತ್ರಿಕ ಕಾರಣ ಗಳಿಂದ ತಿರಸ್ಕರಿಸದೇ, ತಾಂತ್ರಿಕ ಕಾರಣಗಳ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಮತ್ತು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವುದರ ಮೂಲಕ ಅರ್ಹರಾದ ಎಲ್ಲರಿಗೂ ಸರಕಾರದ ವಿವಿಧ ಯೋಜನೆಗಳ ಸಾಲವನ್ನು ವಿತರಣೆಯಾಗುವಂತೆ ನೋಡಿಕೊಳ್ಳಬೇಕು ಎಂದರು.

ದುರ್ಬಲ ವರ್ಗಕ್ಕೆ ಸಾಲ ವಿತರಿಸಲು ವಿಶೇಷ ಒತ್ತು ನೀಡಿದ್ದು, 1,30,277 ಫಲಾನುಭವಿಗಳಿಗೆ 1855 ಕೋಟಿ ರೂ, 1,50,716 ಮಹಿಳೆಯರಿಗೆ 3,452 ಕೋಟಿ ರೂ. ಗಳನ್ನು ವಿತರಿಸಲಾಗಿದೆ. ಎಲ್ಲಾ ಬ್ಯಾಂಕ್‌ಗಳು ಮಾರ್ಚ್ ಅಂತ್ಯದ ವೇಳೆಗೆ ತಮ್ಮ ಗುರಿಯನ್ನು ಸಾಧಿಸುವಂತೆ ತಿಳಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಬೆಂಗಳೂರು ರಿಸರ್ವ್ ಬ್ಯಾಂಕ್‌ನ ಕಾರ್ಯ ನಿರ್ವಾಹಕ ಅಧಿಕಾರಿ ಅಲೋಕ್‌ಕುಮಾರ್ ಸಿನ್ಹಾ ಮಾತನಾಡಿ, ಗ್ರಾಹಕರು ಬ್ಯಾಂಕ್ ವ್ಯವಹಾರದಲ್ಲಿ ಅನ್‌ಲೈನ್ ವಂಚನೆಗೊಳಗಾಗದಂತೆ ಅರಿವು ಮತ್ತು ಜಾಗೃತಿ ಮೂಡಿಸುವಂತೆ ಹಾಗೂ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ, ಬ್ಯಾಂಕ್ ವಹಿವಾಟುಗಳ ನಿರ್ವಹಣೆ ಕುರಿತಂತೆ ಕೇಂದ್ರ ಚುನಾವಣಾ ಆಯೋಗವು ಸೂಚಿಸಿರುವ ಮಾರ್ಗಸೂಚಿಯನ್ನು ಪಾಲಿಸುವಂತೆ ಹಾಗೂ ಆಯೋಗ ಕೋರುವ ಎಲ್ಲಾ ಅಗತ್ಯ ಮಾಹಿತಿಗಳನ್ನು ನೀಡುವಂತೆ ಎಲ್ಲಾ ಬ್ಯಾಂಕ್‌ಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ನಬಾರ್ಡ್‌ನ ಡಿಡಿಎಂ ಸಂಗೀತಾ ಕರ್ಥಾ, ಯೂನಿಯನ್ ಬ್ಯಾಂಕ್‌ನ ಪ್ರಾದೇಶಿಕ ಮ್ಯಾನೇಜರ್ ಡಾ.ವಾಸಪ್ಪ ಎಚ್.ಟಿ. ಅಲ್ಲದೇ ಜಿಲ್ಲೆಯ ವಿವಿಧ ಬ್ಯಾಂಕ್‌ಗಳ ಹಾಗೂ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. 

ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪಿ.ಎಂ.ಪಿಂಜಾರ ಅವರು ಅತಿಥಿಗಳನ್ನು ಸ್ವಾಗತಿಸಿ, ಸಭೆಯನ್ನು ನಿರ್ವಹಿಸಿದರು. 

Similar News