ಮಂಗಳೂರು: ಹಣ ದ್ವಿಗುಣ ಆಮಿಷವೊಡ್ಡಿ ವಂಚನೆ ಆರೋಪ; ಪ್ರಕರಣ ದಾಖಲು

Update: 2023-03-29 16:41 GMT

ಮಂಗಳೂರು, ಮಾ.29: ನಾಲ್ಕು ಟಾಸ್ಕ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಹಣ ದ್ವಿಗುಣಗೊಳಿಸುವುದಾಗಿ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಂದ 5.02 ಲಕ್ಷ ರೂ. ಪಡೆದು ಬಳಿಕ ವಂಚಿಸಿರುವ ಬಗ್ಗೆ  ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರು ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಊರಿಗೆ ಬಂದಿದ್ದ ವೇಳೆ ಮಾ.27ರಂದು ಅಪರಿಚಿತ ಮೊಬೈಲ್ ಸಂಖ್ಯೆಯಿಂದ ವಾಟ್ಸ್‌ಆ್ಯಪ್ ಖಾತೆಗೆ ಪಾರ್ಟ್ ಟೈಂ ಕೆಲಸದ ಕುರಿತ ಸಂದೇಶ ಬಂದಿತ್ತು ಎನ್ನಲಾಗಿದೆ. ಬಳಿಕ ಟೆಲಿಗ್ರಾಂ ಆ್ಯಪ್‌ಗೆ ಮೆಸೇಜ ಬರಲು ಆರಂಭವಾಗಿದ್ದು, ಅದರಲ್ಲಿ ಹಣವನ್ನು ಆನ್‌ಲೈನ್ ಮೂಲಕ ದ್ವಿಗುಣ ಮಾಡಲು 4 ಟಾಸ್ಕ್ ಮಾಡಲು ತಿಳಿಸಲಾಗಿತ್ತು.

ಸಂದೇಶ ಕಳುಹಿಸಿದ ಆರೋಪಿಯು ಮೊದಲಿಗೆ ದೂರುದಾರರ ಖಾತೆಗೆ 150 ರೂ. ಹಾಕಿದ್ದಾರೆ. ಮಾ.28ರಂದು ಮೊದಲ ಟಾಸ್ಕ್‌ನಲ್ಲಿ 12 ಸಾವಿರ ರೂ.ಹಾಕಲು ತಿಳಿಸಿದ್ದು, ಗೂಗಲ್ ಪೇ ಮೂಲಕ ಅದನ್ನು ಪಾವತಿಸಿದ್ದಾರೆ. ಟಾಸ್ಕ್-2ರಲ್ಲಿ 40 ಸಾವಿರ ರೂ. ಹಾಕಲು ತಿಳಿಸಿದ್ದು, ಅದನ್ನೂ ಗೂಗಲ್ ಪೇ ಮೂಲಕ ಪಾವತಿಸಿದ್ದಾರೆ. 3ನೇ ಟಾಸ್ಕ್‌ನಲ್ಲಿ 1 ಲಕ್ಷ ರೂ. ಹಾಕಲು ತಿಳಿಸಿದ್ದು, 40 ಸಾವಿರ ಗೂಗಲ್ ಪೇ ಮೂಲಕ ಮತ್ತು 60 ಸಾವಿರ ರೂ.ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಿದ್ದಾರೆ. ಕೊನೆಯ ಟಾಸ್ಕ್‌ನಲ್ಲಿ 3,50,000 ರೂ.ಹಾಕಲು ತಿಳಿಸಿದ್ದು, ಅದನ್ನೂ ಐಎಂಪಿಎಸ್ ಮೂಲಕ ಪಾವತಿಸಿದ್ದಾರೆ. ನಂತರ ಆರೋಪಿಗಳು ಇನ್ನೂ 10 ಲಕ್ಷ ರೂ. ವರ್ಗಾಯಿಸಿದರೆ, 17 ಲಕ್ಷ ಸಿಗುವುದಾಗಿ ತಿಳಿಸಿದ್ದಾರೆ. ಆಗ ತಾನು ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಹೀಗೆ ಹಂತ ಹಂತವಾಗಿ ಒಟ್ಟು 5,02,000 ರೂ.ವನ್ನು ಅರೋಪಿಗಳು ವರ್ಗಾಯಿಸಿಕೊಂಡು ಮೋಸ, ವಂಚನೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಸೆನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Similar News