ಕೆಂಜಾರು: ಎಂಆರ್‌ಪಿಎಲ್ ಕೊಕ್ ಸಲ್ಫರ್ ಘಟಕದಿಂದ ಹೆಚ್ಚಿನ ಪ್ರಮಾಣದ ಹಾರು ಬೂದಿ

ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು

Update: 2023-03-29 17:11 GMT

ಸುರತ್ಕಲ್: ಇಲ್ಲಿನ ಕೆಂಜಾರು ಪ್ರದೇಶದಲ್ಲಿ ಎಂಆರ್‌ಪಿಎಲ್ ಕೊಕ್ ಸಲ್ಫರ್ ಘಟಕದಿಂದ ಕಳೆದ ರಾತ್ರಿ ಹೆಚ್ಚಿನ ಪ್ರಮಾಣದ ಹಾರು ಬೂದಿ ಬಿದ್ದಿದ್ದು, ಮನೆಗಳ ಹೊರಗೆ ಒಣಗಳು ಹಾಕಿದ್ದ ಬಟ್ಟೆಗಳ ಮೇಲೆ ಬಿದ್ದು ಅವುಗಳು ಸುಟ್ಟು ಹೋಗಿರುವ ಘಟನೆ ವರದಿಯಾಗಿದೆ.

ಅಲ್ಲದೆ, ಕೆಂಜಾರು ಪ್ರದೇಶದಲ್ಲಿರವ ಗಿಡ ಮರಗಳು, ಮನೆಗಳ ಮೇಲ್ಛಾವಣಿ, ರಸ್ತೆ, ಮನೆಗಳ ಅಂಗಳದಲ್ಲಿ ಹಾರು ಬೂದಿಯ ಕಪ್ಪು ಮಸಿ ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಎಂಆರ್‌ಪಿಎಲ್‌ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಅಧಿಕಾರಿಗಳು ಎಂದಿನಂತೆಯೇ ಸ್ಮಶಾನದಿಂದ ಬಂದಿರಬಹುದು, ಗುಡ್ಡಕ್ಕೆ ಬೆಂಕಿ ಬಿದ್ದು ಬಂದಿರಬಹುದು, ನಮ್ಮಿಂದ ಯಾವುದೇ ಸಮಸ್ಯೆಗಳಾಗಿಲ್ಲ ಎಂದು ಸಮಜಾಯಿಷಿ ನೀಡಿದರು ಎನ್ನಲಾಗಿದೆ. ಅಧಿಕಾರಿಗಳ ಸಮಜಾಯಿಷಿಗೆ ಆಕ್ರೋಶ ವ್ಯಕ್ತ ಪಡಿಸಿದ ಸ್ಥಳಿಯರು, "ನೀವು ಪ್ರತೀ ಸಲ ಇಂತಹಾ ನಾಟಕವಾಡಿ ಗ್ರಾಮಸ್ಥರನ್ನು ಮೂರ್ಖರನ್ನಾಗಿಸುವುದು ಬೇಡ. ಸ್ಮಶಾನದಿಂದ ಬಂದು ಬಿದ್ದಿದೆ ಎನ್ನುತ್ತಿರುವ ನೀವು ನಮ್ಮ ಊರಿಗೆ ಬಂದು ಇಡೀ ಊರನ್ನೇ ಸ್ಮಶಾನವಾಗಿ ಮಾರ್ಪಡಿಸುತ್ತಿದ್ದೀರಿ. ಗ್ರಾಮಸ್ಥರನ್ನು ಕಡೆಗಣಿಸಿದರೆ ಕೋಕ್‌ ಸಲ್ಫರ್‌ ಸಾಗಾಟ ಮಾಡುತ್ತಿರುವ ಎಂಆರ್‌ಪಿಎಲ್‌ನ ಗೇಟನ್ನು ಮುಚ್ಚು ತೀವ್ರತರಹದ ಹೋರಾಟ ನಡೆಸಲಾಗುವುದು. ಯಾವುದೇ ನಿಮ್ಮ ಸೆಕ್ಯೂರಿಟಿ ಅಥವಾ ಪೊಲೀಸ್‌ ತುಕಡಿಗಳನ್ನು ತಂದರೂ ಎಂಆರ್‌ಪಿಎಲ್‌ ವಿರುದ್ಧ ತೀವ್ರ ರೀತಿಯ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗ್ರಾಮಮಸ್ಥರ ಆಕ್ರೋಶಕ್ಕೆ ಕಂಗಾಲಾದ ಎಂಆರ್‌ಪಿಎಲ್‌ ಅಧಿಕಾರಿಗಳು, ಈ ಬಗ್ಗೆ ಈ ಕಪ್ಪು ಹುಡಿ ಎಂಆರ್‌ಪಿಎಲ್‌ನದ್ದು ಅಗಿರಲು ಸಾಧ್ಯವಿಲ್ಲ. ಈ ಕುರಿತು ಪರಿಶಿಲನೆ ನಡೆಸಲಾಗುವುದು, ಮುಂದಿನ ದಿನಗಳಲ್ಲಿ ಇಂತಹಾ ಸಮಸ್ಯೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿರುವುದಾಗಿ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ಈ ಕುರಿತು ʼವಾರ್ತಾಭಾರತಿʼ ಜೊತೆ ಮಾತನಾಡಿರುವ ಹೋರಾಟ ಸಮಿತಿಯ ಅಧ್ಯಕ್ಷ ಹಾಗೂ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ, ಎಂಆರ್‌ಪಿಎಲ್‌ನ ಕೋಕ್‌ ಸಲ್ಫರ್‌ ಘಟಕ ಗ್ರಾಮಸ್ಥರಿಗೆ ಅನ್ಯಾಯ ಮಾಡುತ್ತಿದೆ. ಇಂತಹಾ ಪ್ರಸಂಗಗಳು ಎದುರಾಗುವ ಹಿನ್ನೆಲೆಯಲ್ಲಿ 4 ವರ್ಷಗಳ ಹಿಂದೆ ಕೋಕ್‌ ಸಲ್ಫರ್‌ ಘಟಕಕ್ಕೆ ರಸ್ತೆ ನಿರ್ಮಾಣ ಮಾಡುವಾಗಲೇ ಅದರ ವಿರುದ್ಧ ಹೋರಾಟ ಸಂಘಟಿಸಿ ಬಂದ್‌ ಮಾಡಿಸಲಾಗಿತ್ತು. ಆದರೆ, ಇತ್ತೀಚೆಗೆ ಒಂದು ವರ್ಷದ ಹಿಂದೆ ಸರಕಾರ ಸೂಚಿಸಿರುವ ಮಟ್ಟದಲ್ಲಿ ಹಸಿರೀಕರಣ ಮಾಡುವುದಾಗಿ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಸಭೆ ನಡೆಸಿ ಭರವಸೆ ನೀಡಿದ್ದರು. ಆ ಬಳಿಕ ಸಚಿವರ ಭರವಸೆಗೆ ಬೆಲೆಕೊಟ್ಟು ಕಾಮಗಾರಿಗೆ ಅವಕಾಶ ನೀಡಿದ್ದೆವು. ಆದರೆ, ಎಂಆರ್‌ಪಿಎಲ್‌ನವರು ಸರಕಾರ ಸೂಚಿಸಿರುವ ಹಸಿರೀಕರಣವನ್ನೂ ಮಾಡುವುದಿಲ್ಲ, ಪರಿಸರ ಮಾಲಿನ್ಯವನ್ನೂ ತಡೆಗಟ್ಟುವುದಿಲ್ಲ. ಸರಕಾರವಾಗಲೀ, ಅಧಿಕಾರಿಗಳಲಾಗಲೀ ಈ ಕುರಿತು ತಲೆ ಕೆಡಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Similar News