ಬಿಜೆಪಿ ಆಡಳಿತ ಅಂತ್ಯಗೊಂಡರೆ ಭಾರತ ಭ್ರಷ್ಟಾಚಾರ ಮುಕ್ತವಾಗುತ್ತದೆ: ಕೇಜ್ರಿವಾಲ್

“ಎಲ್ಲ ಕಳ್ಳರು, ಲೂಟಿಕೋರರು ಮತ್ತು ಭ್ರಷ್ಟರು ಒಂದೇ ಪಕ್ಷದಲ್ಲಿದ್ದಾರೆ”

Update: 2023-03-29 17:27 GMT

ಹೊಸದಿಲ್ಲಿ,ಮಾ.29: ಸಿಬಿಐ ಮತ್ತು ಈ.ಡಿ.ದಾಳಿಗಳು ಎಲ್ಲ ಭ್ರಷ್ಟರನ್ನು ‘ಒಂದೇ ಪಕ್ಷದ’ ತೆಕ್ಕೆಗೆ ತಂದಿವೆ ಎಂದ ಬುಧವಾರ ಆರೋಪಿಸಿದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ಬಿಜೆಪಿ ಆಡಳಿತವು ಅಂತ್ಯಗೊಂಡಾಗ ದೇಶವು ಭ್ರಷ್ಟಾಚಾರ ಮುಕ್ತವಾಗುತ್ತದೆ ಎಂದು ಹೇಳಿದರು.

ದಿಲ್ಲಿ ವಿಧಾನಸಭೆಯಲ್ಲಿ ತಾನು ಮಂಡಿಸಿದ ವಿಶ್ವಾಸಮತ ನಿರ್ಣಯದ ಮೇಲೆ ಮಾತನಾಡಿದ ಅವರು, ದೇಶದಲ್ಲಿ ಪ್ರಜಾಪ್ರಭುತ್ವವನ್ನು ತುಳಿಯುವ ಯಾವುದೇ ಅವಕಾಶವನ್ನು ಬಿಜೆಪಿ ಬಿಟ್ಟಿಲ್ಲ ಎಂದು ಆರೋಪಿಸಿದರು.

ಎಲ್ಲ ಕಳ್ಳರು, ಲೂಟಿಕೋರರು ಮತ್ತು ಭ್ರಷ್ಟರು ಒಂದು ಪಕ್ಷದಲ್ಲಿದ್ದಾರೆ. ಬಿಜೆಪಿ ಸರಕಾರದ ಆಡಳಿತ ಅಂತ್ಯಗೊಂಡು ಬಿಜೆಪಿಗರು ಜೈಲು ಸೇರಿದಾಗ ದೇಶವು ಭ್ರಷ್ಟಾಚಾರ ಮುಕ್ತವಾಗಲಿದೆ ಎಂದರು.

ಸಿಬಿಐ ಮತ್ತು ಈ.ಡಿ.ದಾಳಿಗಳ ಮೂಲಕ ತನ್ನ ಶಾಸಕರಿಗೆ ಬೆದರಿಸಲಾಗಿತ್ತು ಮತ್ತು 25 ಕೋ.ರೂ.ಗಳ ಲಂಚದ ಆಮಿಷವನ್ನು ಒಡ್ಡಲಾಗಿತ್ತು. ಆದರೆ ಇದ್ಯಾವುದೂ ಅವರನ್ನು ಮಣಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ ಕೇಜ್ರಿವಾಲ್,‘ನಿಮ್ಮಲ್ಲಿ ಪ್ರತಿಯೊಬ್ಬರೂ ರತ್ನಗಳಾಗಿದ್ದೀರಿ, ಹೆದರಬೇಡಿ. ನೀವು ಜೈಲಿಗೆ ಹೋದರೂ ಸಹ ನಾನು ನಿಮ್ಮ ಕುಟುಂಬದ ಕಾಳಜಿಯನ್ನು ವಹಿಸುತ್ತೇನೆ ’ಎಂದರು.

ದಿಲ್ಲಿ ವಿಧಾನಸಭೆಯಲ್ಲಿ ನಡೆಯುತ್ತಿರುವುದು ಇಂದು ಪ್ರಜಾಪ್ರಭುತ್ವಕ್ಕಾಗಿ ಧನಾತ್ಮಕ ಸಂದೇಶವನ್ನು ರವಾನಿಸುತ್ತದೆ ಎಂದು ಅವರು ಹೇಳಿದರು.

‘ನಾವು ಪ್ರಜಾಪ್ರಭುತ್ವದಲ್ಲಿ ನಂಬಿಕೆಯನ್ನು ಹೊಂದಿದ್ದೇವೆ, ಹೀಗಾಗಿ ಬಿಜೆಪಿ ಸದಸ್ಯರಿಗೆ ನಮ್ಮ ಸರಕಾರದ ವಿರುದ್ಧ ಅವಿಶ್ವಾಸ ಸೂಚನೆಯನ್ನು ತರಲು ಸಾಧ್ಯವಾಗಲಿಲ್ಲವಾದರೂ ನಾವು ಅವರಿಗೆ ಮಾತನಾಡಲು ಅವಕಾಶ ನೀಡಿದ್ದೆವು, ನಾವು ಟೀಕೆಗಳನ್ನು ಸ್ವಾಗತಿಸುತ್ತೇವೆ. ಆದರೆ ಈ ಜನರಿಗೆ ಜಗಳವಾಡುವುದು ಮತ್ತು ನಿಂದಿಸುವುದು ಮಾತ್ರ ತಿಳಿದಿದೆ. 2025ರ ವಿಧಾನಸಭಾ ಚುನಾವಣೆಯನ್ನು ಬಿಡಿ, 2050ರಲ್ಲಿಯೂ ದಿಲ್ಲಿಯಲ್ಲಿ ಗೆಲ್ಲುವುದು ಬಿಜೆಪಿಗೆ ಸಾಧ್ಯವಿಲ್ಲ ’ ಎಂದರು.

ಅಧಿವೇಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, ‘ತಾನು ಅವಿಶ್ವಾಸ ನಿರ್ಣಯವನ್ನು ಮಂಡಿಸುವುದಾಗಿ ಬಿಜೆಪಿ ಪ್ರಕಟಿಸಿತ್ತು. ಆದರೆ ಇಂತಹ ನಿರ್ಣಯ ಮಂಡಿಸಲು ಕನಿಷ್ಠ ಶೇ.20ರಷ್ಟು ಶಾಸಕರ ಸಹಿಗಳು ಅಗತ್ಯವಾಗಿವೆ. ಹೀಗಾಗಿ ಅವರು ಅದಕ್ಕಾಗಿ ನಮ್ಮ ಶಾಸಕರಿಗೆ ಬೆದರಿಕೆಯೊಡ್ಡಿದ್ದರು. ಭೀತಿ ಮತ್ತು ಬೆದರಿಕೆಗಳಿಗೆ ಆಪ್ ಶಾಸಕರು ಮಣಿಯುವುದಿಲ್ಲ. ನಮ್ಮ ವಿಶ್ವಾಸಮತ ನಿರ್ಣಯವು ಭಾರೀ ಬಹುಮತದಿಂದ ಗೆದ್ದಿದೆ ’ಎಂದು ಹೇಳಿದರು.

Similar News