ಬೈಸಾಕಿಯಂದು ಸಿಕ್ಖ್ ಸಮಾವೇಶಕ್ಕೆ ಕರೆ ನೀಡಿದ ಅಮೃತ್‌ಪಾಲ್!

Update: 2023-03-30 02:11 GMT

ಹೊಸದಿಲ್ಲಿ: ಖಲಿಸ್ತಾನ್ ಪ್ರತಿಪಾದಕ ಅಮೃತ್‌ಪಾಲ್, ಈ ತಿಂಗಳ 14ರಂದು ಬೈಸಾಕಿ ಹಬ್ಬದ ಸಂದರ್ಭ ಪಂಜಾಬ್‌ನ ತಲವಂಡಿ ಸಾಬೋದಲ್ಲಿರುವ ದಮ್‌ದಮಾ ಸಾಹಿಬ್‌ನಲ್ಲಿ ಸರ್ಬತ್ ಖಾಲ್ಸಾ (ಸಿಕ್ಖ್ ಸಮಾವೇಶ) ಆಯೋಜಿಸುವಂತೆ ಅಕಾಲ್ ತಖ್ತ್ ಜಾತೇದಾರ್‌ಗೆ ಕರೆ ನೀಡಿರುವ ವಿಡಿಯೊ ಬುಧವಾರದಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಜಾತೇದಾರ್ ಜ್ಞಾನಿ ಹರ್‌ಪ್ರೀತ್ ಸಿಂಗ್ ಅವರು "ಅತ್ಯಂತ ಕಠಿಣ ನಿಲುವು" ತೆಗೆದುಕೊಳ್ಳಬೇಕು ಮತ್ತು ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಿಕ್ಖರು ದೊಡ್ಡ ಸಂಖ್ಯೆಯಲ್ಲಿ ಸರ್ಬತ್ ಖಾಲ್ಸಾದಲ್ಲಿ ಭಾಗವಹಿಸಬೇಕು ಎಂದು ವಿಡಿಯೊದಲ್ಲಿ ಮನವಿ ಮಾಡಿದ್ದಾರೆ. ಮಾರ್ಚ್ 18ರಿಂದ ಪೊಲೀಸರು ಅಮೃತ್‌ಪಾಲ್ ಹಾಗೂ ಅವರ ನಾಯಕತ್ವದ ಪಂಜಾಬ್ ಡೇ ಗ್ರೂಪ್ ವಿರುದ್ಧ ಕೈಗೊಂಡಿರುವ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಇಡೀ ಸಮುದಾಯದ ಭಾವನೆಗಳನ್ನು ಒಗ್ಗೂಡಿಸುವ ಪ್ರಯತ್ನ ಇದು ಎಂದು ವಿಶ್ಲೇಷಿಸಲಾಗುತ್ತಿದೆ.

ಅಮೃತ್‌ಸರ ಸಮೀಪ 2015ರಲ್ಲಿ ಸರ್ಬತ್ ಖಾಲ್ಸಾ ಆಯೋಜಿಸಿದ್ದ ಜರ್ನೈಲ್ ಸಿಂಗ್ ಸಖೀರಾ ಈ ಈ ಬಗ್ಗೆ ಪ್ರತಿಕ್ರಿಯಿಸಿ, "ಏಕ ವ್ಯಕ್ತಿ ಸರ್ಬತ್ ಖಾಲ್ಸಾಗೆ ಕರೆ ನೀಡುವಂತಿಲ್ಲ. ಇದು ನಡೆದು ಬಂದಿರುವ ಸಂಪ್ರದಾಯಕ್ಕೆ ವಿರೋಧ" ಎಂದು ಹೇಳಿದ್ದಾರೆ. ಅಮೃತ್‌ಪಾಲ್ ಜತೆ ಗುರುತಿಸಿಕೊಂಡ 360 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ. ಆದರೆ ಅಮೃತ್‌ಪಾಲ್ ತಪ್ಪಿಸಿಕೊಂಡಿದ್ದಾರೆ.

ಈಗಾಗಲೇ ಬಂಧಿಸಿರುವ ಎಲ್ಲ ಅಮೃತ್‌ಪಾಲ್ ಬೆಂಬಲಿಗರನ್ನು ಬಿಡುಗಡೆ ಮಾಡಲು 24 ಗಂಟೆಗಳ ಗಡುವು ವಿಧಿಸಿ ವಿಶ್ವ ಸಿಕ್ಖ್ ಸಂಘಟನೆಯಾದ ಅಕಾಲ್ ತಖ್ತ್ ಜಾತೇದಾರ್ ಪಂಜಾಬ್ ಸರ್ಕಾರವನ್ನು ಆಗ್ರಹಿಸಿದೆ. ಪೊಲೀಸರು ಬಂಧಿಸಿರುವ 360 ಮಂದಿಯ ಪೈಕಿ 348 ಮಂದಿಯನ್ನು ಬಿಡುಗಡೆ ಮಾಡಲಾಗಿದ್ದು, ಉಳಿದವರನ್ನು ಶೀಘ್ರವೇ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

Similar News