ರಾಹುಲ್ ಗಾಂಧಿ ಅನರ್ಹತೆಗೆ ಜರ್ಮನಿ ಪ್ರತಿಕ್ರಿಯೆ ಹೀಗಿದೆ..

Update: 2023-03-30 06:02 GMT

ಹೊಸದಿಲ್ಲಿ: ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿಯವರ ಸಂಸತ್ ಸದಸ್ಯತ್ವದ ಅನರ್ಹತೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜರ್ಮನಿ, "ಈ ಪ್ರಕರಣದಲ್ಲಿ ನ್ಯಾಯಾಂಗದ ಸ್ವಾತಂತ್ರ್ಯದ ಮಾನದಂಡ ಹಾಗೂ ಮೂಲಭೂತ ಪ್ರಜಾಸತ್ತಾತ್ಮಕ ತತ್ವಗಳನ್ನು ಅನ್ವಯಿಸಬೇಕು" ಎಂದು ಅಭಿಪ್ರಾಯಪಟ್ಟಿದೆ.

"ರಾಹುಲ್‌ಗಾಂಧಿ ವಿರುದ್ಧದ ತೀರ್ಪು ಮತ್ತು ಅವರ ಸಂಸದೀಯ ಹಕ್ಕನ್ನು ಅಮಾನತು ಮಾಡಿರುವ ಕ್ರಮವನ್ನು ಸರ್ಕಾರ ಗಮನಿಸಿದೆ" ಎಂದು ಜರ್ಮನಿಯ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ. ಜರ್ಮನಿ ಅಥವಾ ಯಾವುದೇ ಯೂರೋಪಿಯನ್ ದೇಶ ರಾಹುಲ್ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವುದು ಇದೇ ಮೊದಲು.

"ನಮಗೆ ತಿಳಿದಂತೆ ಗಾಂಧಿಯವರು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಹಂತದಲ್ಲಿದ್ದಾರೆ. ಆಗ ಈ ತೀರ್ಪು ನಿಲ್ಲುತ್ತದೆಯೇ ಅಥವಾ ಅವರ ಸಂಸದೀಯ ಹಕ್ಕು ಅಮಾನತು ಮಾಡಿರುವುದಕ್ಕೆ ಯಾವುದೇ ಆಧಾರ ಇದೆಯೇ ಎನ್ನುವುದು ಸ್ಪಷ್ಟವಾಗುತ್ತದೆ" ಎಂದು ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.

"ರಾಹುಲ್‌ಗಾಂಧಿ ವಿರುದ್ಧದ ಕ್ರಮದಲ್ಲಿ ನ್ಯಾಯಾಂಗ ಸ್ವಾತಂತ್ರ್ಯದ ಮಾನದಂಡ ಹಾಗೂ ಮೂಲಭೂತ ಪ್ರಜಾಸತ್ತಾತ್ಮಕ ತತ್ವಗಳನ್ನು ಸಮಾನವಾಗಿ ಅನ್ವಯಿಸಬೇಕು ಎನ್ನುವುದು ನಮ್ಮ ನಿರೀಕ್ಷೆ" ಎಂದು ಸ್ಪಷ್ಟಪಡಿಸಿದರು. ಇದಕ್ಕೆ ಭಾರತ ಸರ್ಕಾರದಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

Similar News