ರಾಹುಲ್ ಗಾಂಧಿ ವಿರುದ್ಧ ಬ್ರಿಟನ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುತ್ತೇನೆ: ಲಲಿತ್ ಮೋದಿ

Update: 2023-03-30 09:46 GMT

ಲಂಡನ್: ಭ್ರಷ್ಟಾಚಾರ ಹಾಗೂ ಅಕ್ರಮ ಹಣ ವರ್ಗಾವಣೆಯನ್ನು ಮೋದಿ ಹೆಸರಿನೊಂದಿಗೆ ತಳುಕು ಹಾಕಿ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬ್ರಿಟನ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುತ್ತೇನೆ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ ಸ್ಥಾಪಕ ಹಾಗೂ ಅದರ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಬೆದರಿಕೆ ಒಡ್ಡಿದ್ದಾರೆ. ಐಪಿಎಲ್ ಕ್ರೀಡಾಕೂಟದಲ್ಲಿ ಹಣಕಾಸು ಅವ್ಯವಹಾರ ಕೇಳಿ ಬಂದ ನಂತರ 2010ರಿಂದ ಲಲಿತ್ ಮೋದಿ ಲಂಡನ್‌ನಲ್ಲಿ ಆಶ್ರಯ ಪಡೆದಿದ್ದಾರೆ ಎಂದು outlook.com ವರದಿ ಮಾಡಿದೆ.

ಗುರುವಾರ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಲಲಿತ್ ಮೋದಿ, "ಪ್ರತಿಯೊಬ್ಬರೂ ಹಾಗೂ ರಾಹುಲ್ ಗಾಂಧಿ ಸಹವರ್ತಿಗಳು ಪದೇ ಪದೇ ನನ್ನನ್ನು ನ್ಯಾಯಭ್ರಷ್ಟ ಎಂದು ಕರೆಯುತ್ತಿದ್ದಾರೆ. ಏಕೆ? ಹೇಗೆ? ಮತ್ತು ಈ ದಿನದವರೆಗೆ ನಾನು ದೋಷಿ ಎಂದು ನಿರೂಪಿತನಾಗದಿದ್ದರೂ.." ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಅಲ್ಲಗಳೆದಿರುವ ಲಲಿತ್ ಮೋದಿ, "ನನ್ನ ವಿರುದ್ಧದ ಆರೋಪಗಳು ಈ ದಿನದವರೆಗೂ ಸಾಬೀತಾಗಿಲ್ಲ ಹಾಗೂ ವಿಶ್ವದ ಅತಿ ದೊಡ್ಡ ಕ್ರೀಡಾಕೂಟದ ಹಿಂದಿನ ವ್ಯಕ್ತಿ ನಾನೂ ಕೂಡಾ ಆಗಿದ್ದೆ" ಎಂದು ಹೇಳಿದ್ದಾರೆ.

ಮೋದಿ ಉಪನಾಮದ ಕುರಿತು ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯ ವಿರುದ್ಧ 2019ರ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಯನ್ನು ದೋಷಿ ಎಂದು ಸೂರತ್ ನ್ಯಾಯಾಲಯವೊಂದು ಘೋಷಿಸಿದ ಕೆಲವೇ ದಿನಗಳ ಅಂತರದಲ್ಲಿ ಲಲಿತ್ ಮೋದಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ಕರ್ನಾಟಕದ ಕೋಲಾರದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, "ಹೇಗೆ ಎಲ್ಲ ವಂಚಕರ ಹೆಸರಿನೊಂದಿಗೆ ಮೋದಿ ಉಪನಾಮವಿದೆ?" ಎಂದು ಪ್ರಶ್ನಿಸಿದ್ದರು.

Similar News