ದೋಷಿಯೆಂದು ಪರಿಗಣಿಸಲ್ಪಟ್ಟ ಕೂಡಲೇ ಸಂಸದನನ್ನು ಅನರ್ಹಗೊಳಿಸುವುದು ಕಠೋರ ಕ್ರಮ : ಸುಪ್ರೀಂಕೋರ್ಟ್

Update: 2023-03-30 18:02 GMT

ಹೊಸದಿಲ್ಲಿ,ಮಾ.30: ದೋಷಿಯೆಂದು ನ್ಯಾಯಾಲಯದಿಂದ ಪರಿಗಣಿಸಲ್ಪಟ್ಟ ಕೂಡಲೇ ಲೋಕಸಭಾ ಸದಸ್ಯನನ್ನು ಅನರ್ಹಗೊಳಿಸುವುದು ‘‘ಅತ್ಯಂತ ಕಠೋರ ಕ್ರಮವಾಗುತ್ತದೆ’’ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಿಸಿರುವುದಾಗಿ ಬಾರ್ ಆ್ಯಂಡ್ ಬೆಂಚ್’ ಕಾನೂನುಸುದ್ದಿ ಜಾಲತಾಣ‘ ವರದಿ ಮಾಡಿದೆ.

ಕೊಲೆಯನ್ನ ಪ್ರಕರಣವೊಂದರಲ್ಲಿ ದೋಷಿಯೆಂದು ಪರಿಗಣಿಸಲ್ಪಟ್ಟ ಎನ್‌ಸಿಪಿ ನಾಯಕ ಮೊಹಮ್ಮದ್ ಫೈಝಲ್ ಅಪರಾಧಿಯೆಂದು ಪರಿಗಣಿಸಿದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಕೇರಳ ಹೈಕೋರ್ಟ್ ಅಮಾನತಿನಲ್ಲಿರಿಸಿತ್ತು. ಈ ಹಿನ್ನೆಲೆಯಲ್ಲಿ ತನ್ನ ಸಂಸತ್ ಸದಸ್ಯತ್ವವನ್ನು ಮರುಸ್ಥಾಪಿಸಬೇಕೆಂದು ಫೈಝಲ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಫೈಝಲ್ ಅವರ ಮನವಿಯನ್ನು ವಿರೋಧಿಸಿ ಲಕ್ಷದ್ವೀಪ ಆಡಳಿತದ ವಕೀಲರು ಮಂಡಿಸಿದ ವಾದ ಆಲಿಸಿದ ಸಂದರ್ಭ ಕೆ.ಎಂ. ಜೋಸೆಫ್‌ಹಾಗೂ ಬಿ.ವಿ.ನಾಗರತ್ನ ಅವರನ್ನೊಳಗೊಂಡ ನ್ಯಾಯಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಕೊಲೆಯತ್ನ ಪ್ರಕರಣದಲ್ಲಿ ಸಂಸದ ಮೊಹಮ್ಮದ್ ಫೈಝಲ್‌ಗೆ ದೋಷಿಯೆಂದು ಪರಿಗಣಿಸಿ ವಿಚಾರಣಾ ನ್ಯಾಯಾಲಯವು ಅವರಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು.

1951ರ ಜನತಾ ಪ್ರಾತಿನಿಧ್ಯ ಕಾಯ್ದೆಯಡಿ ಎರಡು ವರ್ಷ ಅಥವಾ ಅದಕ್ಕಿಂತ ಅಧಿಕ ವರ್ಷ ಜೈಲು ಶಿಕ್ಷೆಗೊಳಗಾದ ಶಾಸನಸಭೆಯ ಸದಸ್ಯನನ್ನು ಆತನ ಜೈಲು ಶಿಕ್ಷೆಯ ಅವಧಿ ಕೊನೆಗೊಂಡ ಆನಂತರ ಆರು ವರ್ಷಗಳ ಕಾಲ ಅನರ್ಹಗೊಳ್ಳುತ್ತಾನೆ.

ಕೇರಳ ಹೈಕೋರ್ಟ್ ಆದೇಶದ ಆಧಾರದಲ್ಲಿ ತನ್ನ ಸದಸ್ಯತ್ವವನ್ನು ಮರುಸ್ಥಾಪಿಸಬೇಕೆಂಬ ಫೈಝಲ್ ಅವರ ಅರ್ಜಿಯ ಆಲಿಕೆಯನ್ನು ಸುಪ್ರೀಂಕೋರ್ಟ್ ನಡೆಸುವುದಕ್ಕೆ ಕೆಲವೇ ತಾಸುಗಳ ಮೊದಲು ಫೈಝಲ್‌ನ ಅನರ್ಹತೆಯನ್ನು ಬುಧವಾರ ರದ್ದುಪಡಿಸಲಾಗಿತ್ತು.

ಫೈಝಲ್ ಅವರ ಅರ್ಜಿಯನ್ನು ವಿಲೇವಾರಿ ಮಾಡಿದ ನ್ಯಾಯಪೀಠವು, ಶಾಸಕಾಂಗಗಳ ಸದಸ್ಯರಿಗೆ ಶಿಕ್ಷೆಯನ್ನು ಘೋಷಿಸುವಾಗ ಜಾಗರೂಕತೆಯಿಂದ ವರ್ತಿಸಬೇಕಾದ ಅಗತ್ಯವಿದೆಯಂದು ಅಭಿಪ್ರಾಯಿಸಿತು.

ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಗುಜರಾತ್‌ನ ನ್ಯಾಯಾಲಯವೊಂದು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಸಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿರುವುದು ಗಮನಾರ್ಹವಾಗಿದೆ.

ತನ್ನ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ನ್ಯಾಯಾಲಯವು ರಾಹುಲ್‌ಗೆ 30 ದಿನಗಳ ಕಾಲಾವಕಾಶ ನೀಡಿತ್ತು. ಆದರೆ ಲೋಕಸಭಾ ಕಾರ್ಯದರ್ಶಿಯವರು ಮಾರ್ಚ್ 24ರಂದು ಆದೇಶ ಹೊರಡಿಸಿ, ರಾಹುಲ್‌ರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ್ದರು.

Similar News