ಐಐಟಿ ಬಾಂಬೆಯಲ್ಲಿ ದಲಿತ ವಿದ್ಯಾರ್ಥಿ ಆತ್ಮಹತ್ಯೆ: FIR ದಾಖಲಿಸಲು ಪೊಲೀಸರ ನಿರಾಕರಣೆ; ತಂದೆಯ ಆರೋಪ

Update: 2023-03-30 16:24 GMT

ಮುಂಬೈ, ಮಾ. 30: ನಗರ ಪೊಲೀಸರು ತನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಹಾಗೂ ಪ್ರಕರಣದಲ್ಲಿ FIR ದಾಖಲಿಸಲು ನಿರಾಕರಿಸುತ್ತಿದ್ದಾರೆ ಎಂದು ಐಐಟಿ ಬಾಂಬೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ದಲಿತ ವಿದ್ಯಾರ್ಥಿ ದರ್ಶನ್ ಸೋಲಂಕಿ ಅವರ ತಂದೆ ಬುಧವಾರ ಆರೋಪಿಸಿದ್ದಾರೆ.

ದರ್ಶನ್ ಸೋಲಂಕಿ ಅವರ ತಂದೆ ರಮೇಶ್‌ಭಾ ಸೋಲಂಕಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರಿಗೆ ಬುಧವಾರ ಬರೆದ ಪತ್ರದಲ್ಲಿ, ‘‘ಪೊಲೀಸರು ಹಾಗೂ ವಿಶೇಷ ತನಿಖಾ ತಂಡದ ಸದಸ್ಯರಿಂದ ತನ್ನ ಕುಟುಂಬ ಸಂಪೂರ್ಣವಾಗಿ ಆಘಾತ ಹಾಗೂ ಹತಾಶೆಗೆ ಒಳಗಾಗಿದೆ, ಅವರು ಕಳೆದ ಎರಡು ವಾರಗಳಿಂದ ಎಫ್‌ಐಆರ್ ದಾಖಲಿಸಲು ನಿರಾಕರಿಸುತ್ತಿದ್ದಾರೆ’’ ಎಂದಿದ್ದಾರೆ.

ದೂರಿನಲ್ಲಿ ಘಟನೆಯ ಕುರಿತು ಅವರ ಆಯಾಮದಲ್ಲಿ ಬರೆಯುವಂತೆ ಪೊಲೀಸರು ಹಾಗೂ ವಿಶೇಷ ತನಿಖಾ ತಂಡ ಬಲವಂತ ಪಡಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ‘‘ಅವರ ವರ್ತನೆ ನಮ್ಮಲ್ಲಿ ಯಾವುದೇ ವಿಶ್ವಾಸವನ್ನು ಮೂಡಿಸುತ್ತಿಲ್ಲ. ದರ್ಶನ್ ಎದುರಿಸಿದ ಜಾತಿ ತಾರತಮ್ಯದ ಆಯಾಮದ ತನಿಖೆಯನ್ನು ಬದಿಗೊತ್ತಲು ಹಾಗೂ ಬೇರೆಡೆ ತಿರುಗಿಸಲು ಎಸ್‌ಐಟಿ ಪ್ರಯತ್ನಿಸುತ್ತಿದೆ ಎಂದು ನಾವು ಆತಂಕಗೊಂಡಿದ್ದೇವೆ’’ ಎಂದು ಅವರು ಹೇಳಿದ್ದಾರೆ.

ಈ ಪತ್ರದ ಪ್ರತಿಯನ್ನು ಅವರು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಮುಂಬೈ ಪೊಲೀಸ್ ಆಯುಕ್ತ ವಿವೇಕ್ ಫನ್ಸಾಲ್ಕರ್‌ಗೆ ಕೂಡ ಕಳುಹಿಸಿದ್ದಾರೆ. ಅಲ್ಲದೆ ಸ್ವತಂತ್ರ ತನಿಖೆ ನಡೆಸುವಂತೆ ಹಾಗೂ ಸೋಲಂಕಿ ಕುಟುಂಬ ಸಲ್ಲಿಸಿದ ಆರಂಭಿಕ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸುವಂತೆ ಕೋರಿದ್ದಾರೆ.

‘‘ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ಜಾತಿ ತಾರತಮ್ಯದಿಂದ ಅಕಾಲಿಕ ಮರಣ ಹೊಂದಿದ ತನ್ನ ಪುತ್ರನಿಗೆ ನ್ಯಾಯ ಒದಗಿಸಲು ಹಾಗೂ ಸತ್ಯವನ್ನು ಎತ್ತಿ ಹಿಡಿಯಲು ಈ ವಿಷಯದ ಕುರಿತು ತುರ್ತಾಗಿ ಕಾರ್ಯ ನಿರ್ವಹಿಸಿ’’ ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ. ಸೋಲಂಕಿಯ ಹಾಸ್ಟೆಲ್ ಕೊಠಡಿಯಲ್ಲಿ ಸುಸೈಡ್ ನೋಟ್ ಪತ್ತೆಯಾಗಿತ್ತು. ಅದರಲ್ಲಿ ಆತ ತನ್ನ ಸಹಪಾಠಿಯ ಹೆಸರು ಉಲ್ಲೇಖಿಸಿದ್ದ ಎಂದು ಎಸ್‌ಐಟಿ ಸೋಮವಾರ ಪ್ರತಿಪಾದಿಸಿತ್ತು.

Similar News