ಅಲ್-ಅಖ್ಸಾ ಮಸೀದಿ ಮೇಲೆ ನಡೆದ ಆಕ್ರಮಣಕ್ಕೆ ಇಸ್ರೇಲ್ ಹೊಣೆಯಾಗಬೇಕು:ಆರ್ ಸಿಜೆಎ ಆಗ್ರಹ

Update: 2023-03-30 16:59 GMT

ಜೆರುಸಲೇಂ, ಮಾ.30: ಅಲ್-ಅಖ್ಸಾ ಮಸೀದಿಯ ಮೇಲೆ ನಡೆದಿರುವ ಆಕ್ರಮಣಕ್ಕೆ ಇಸ್ರೇಲ್ ಜವಾಬ್ದಾರನಾಗಬೇಕು ಎಂದು `ರಾಯಲ್ ಕಮಿಟಿ ಫಾರ್ ಜೆರುಸಲೇಂ ಅಫೇರ್ಸ್( ಆರ್ ಸಿಜೆಎ)'ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಕನ್ನಾನ್ ಆಗ್ರಹಿಸಿದ್ದಾರೆ.

ಇಸ್ರೇಲ್‍ನ ಕಾರ್ಯನೀತಿಯು ಅದರ ತೀವ್ರ ಬಲಪಂಥೀಯ ಸರಕಾರದ ನೈಜಮುಖವನ್ನು ಅನಾವರಣಗೊಳಿಸಿದೆ. ಆದ್ದರಿಂದ ಫೆಲೆಸ್ತೀನ್ ಜನರನ್ನು, ಆರಾಧನೆಯ ಹಕ್ಕುಗಳು, ಸ್ವಯಂ ನಿರ್ಣಯದ ಹಕ್ಕುಗಳನ್ನು ಸಂರಕ್ಷಿಸಲು ಅಂತರಾಷ್ಟ್ರೀಯ ಮಧ್ಯಸ್ಥಿಕೆಯ ಅಗತ್ಯವಿದೆ ಎಂದು ಸಮಿತಿ ಕರೆ ನೀಡಿದೆ.

ಮಸೀದಿಗೆ  ಪ್ರತೀದಿನ ನಡೆಯುವ ದಾಳಿಯು ಜೆರುಸಲೇಂ ಮತ್ತು ಆಕ್ರಮಿತ ಫೆಲೆಸ್ತೀನ್‍ನಲ್ಲಿ ಇಸ್ರೇಲ್‍ನ ಹೆಚ್ಚುತ್ತಿರುವ ಆಕ್ರಮಣದ ಒಂದು ಭಾಗವಾಗಿದೆ. ಇಸ್ರೇಲ್‍ನ ನಾಯಕತ್ವ, ಕಾರ್ಯಕ್ರಮ ಹಾಗೂ ಮೈತ್ರಿಗಳು ಅಲ್-ಅಖ್ಸಾ ಮಸೀದಿಯನ್ನು ವಿಭಜಿಸುವ ಗುರಿಯನ್ನು ಹೊಂದಿದೆ. ಇಸ್ರೇಲ್‍ನ ಕಾರ್ಯನೀತಿ ಕಟ್ಟಾ ಬಲಪಂಥೀಯ ಸರಕಾರದ ನೈಜ ಮುಖದ ಅನಾವರಣವಾಗಿದೆ ಎಂದು ಕನ್ನಾನ್ ಪ್ರತಿಪಾದಿಸಿದ್ದಾರೆ.

ಇಸ್ರೇಲ್ ನಿಜಕ್ಕೂ ಶಾಂತಿಯನ್ನು ಬಯಸುವುದಾದರೆ ತಕ್ಷಣ ತಾನು ನಡೆಸುತ್ತಿರುವ ಉಲ್ಲಂಘನೆಗಳನ್ನು ಅಂತ್ಯಗೊಳಿಸಬೇಕು, ಫೆಲೆಸ್ತೀನ್‍ಗೆ ಸಂಬಂಧಿಸಿದ ಎಲ್ಲಾ ಅಂತರಾಷ್ಟ್ರೀಯ ನಿರ್ಣಯಗಳಿಗೆ ಬದ್ಧವಾಗಿರಬೇಕು ಮತ್ತು ಜೆರುಸಲೇಂನ ಚಾರಿತ್ರಿಕ ಸ್ಥಿತಿಗತಿಯನ್ನು ವಿರೂಪಗೊಳಿಸುವ ಪ್ರಯತ್ನವನ್ನು ಕೈಬಿಡಬೇಕು. ಜೋರ್ಡಾನ್ ನಿರ್ವಹಿಸುತ್ತಿರುವ, ಜೆರುಸಲೇಂನಲ್ಲಿರುವ  `ಇಸ್ಲಾಮಿಕ್ ಎಂಡೋಮೆಂಟ್ಸ್ ಡಿಪಾರ್ಟ್‍ಮೆಂಟ್' (ಇಸ್ಲಾಮಿಕ್ ದತ್ತಿ ಇಲಾಖೆ) ಅಲ್-ಅಖ್ಸ ಮಸೀದಿಯ ವ್ಯವಹಾರಗಳನ್ನು ನಿರ್ವಹಿಸಲು ವಿಶೇಷ ಅಧಿಕಾರವನ್ನು ಹೊಂದಿರುವ  ಏಕೈಕ ಸಂಸ್ಥೆಯಾಗಿದೆ. ಜೆರುಸಲೇಂನಲ್ಲಿರುವ ಇಸ್ಲಾಮಿಕ್ ಮತ್ತು ಕ್ರಿಶ್ಚಿಯನ್ ಪವಿತ್ರಸ್ಥಳಗಳ ಐತಿಹಾಸಿಕ ಪಾಲಕನಾಗಿ ಜೋರ್ಡಾನ್ ಮುಂದುವರಿಯಲಿದೆ ಮತ್ತು ಫೆಲೆಸ್ತೀನ್ ಹಾಗೂ ಜೆರುಸಲೇಂಗೆ ತನ್ನ ದೃಢ ಬೆಂಬಲವನ್ನು ಮುಂದುವರಿಸಲಿದೆ ಎಂದು ಅಬ್ದುಲ್ಲಾ ಕನ್ನಾನ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸಮುದಾಯದ ಖಂಡನೆ

2022ರ ಎಪ್ರಿಲ್‍ನಲ್ಲಿ ಜೆರುಸಲೇಂನ ಓಲ್ಡ್‍ಸಿಟಿಯಲ್ಲಿರುವ ಅಲ್‍ಅಖ್ಸ ಮಸೀದಿಯಲ್ಲಿ ಫೆಲೆಸ್ತೀನೀಯರು ಹಾಗೂ ಇಸ್ರೇಲ್ ಭದ್ರತಾ ಪಡೆಯ ಮಧ್ಯೆ ಘರ್ಷಣೆ ಭುಗಿಲೆದ್ದಿತ್ತು. ಮಸೀದಿಯೊಳಗೆ ನುಗ್ಗಿದ  ಪೊಲೀಸರತ್ತ ಫೆಲೆಸ್ತೀನೀಯರು ಕಲ್ಲು ಮತ್ತು ಇಟ್ಟಿಗೆಯಿಂದ ದಾಳಿ ನಡೆಸಿದರು ಎಂದು ಆರೋಪಿಸಿದ್ದ ಇಸ್ರೇಲ್ ಪೊಲೀಸರು ಸ್ಟನ್ ಗ್ರೆನೇಡ್ ಸಿಡಿಸಿದರಲ್ಲದೆ, ಲಾಠಿಚಾರ್ಜ್ ನಡೆಸಿ ಅಶ್ರುವಾಯು ಪ್ರಯೋಗಿಸಿದಾಗ 4 ಮಹಿಳೆಯರು, 27 ಮಕ್ಕಳ ಸಹಿತ ಸುಮಾರು 160 ಫೆಲೆಸ್ತೀನೀಯರು ಗಾಯಗೊಂಡಿದ್ದರು ಎಂದು ಮಾಧ್ಯಮಗಳ ವರದಿ ಹೇಳಿದೆ.

ಇಸ್ರೇಲ್ ಪೊಲೀಸರು ಅನಗತ್ಯ ಬಲಪ್ರಯೋಗಿಸಿದ್ದಾರೆ ಎಂದು ಅಂತರಾಷ್ಟ್ರೀಯ ಸಮುದಾಯದಿಂದ  ಖಂಡನೆ ವ್ಯಕ್ತವಾಗಿತ್ತು. 

Similar News