ಹಿಜಾಬ್ ತೆಗೆಯಲು ಯುವತಿಗೆ ಬಲವಂತ: ಆರು ಮಂದಿ ಆರೋಪಿಗಳ ಬಂಧನ

Update: 2023-03-30 17:45 GMT

ವೆಲ್ಲೂರು: ಈ ವಾರದ ಆರಂಭದಲ್ಲಿ ವೆಲ್ಲೂರಿನಲ್ಲಿರುವ ಐತಿಹಾಸಿಕ ವೆಲ್ಲೂರು ಕೋಟೆಗೆ ಭೇಟಿ ನೀಡಿದ ಸಂದರ್ಭ ಯುವತಿಯೋರ್ವಳಲ್ಲಿ ಹಿಜಾಬ್ ತೆಗೆಯುವಂತೆ ಬಲವಂತಪಡಿಸಿದ ಹಾಗೂ ಅದನ್ನು ವೀಡಿಯೊ ಮಾಡಿದ ಆರು ಮಂದಿ ಆರೋಪಿಗಳನ್ನು ಉತ್ತರ ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಯುವತಿಯನ್ನು ಹಿಜಾಬ್ ತೆಗೆಯುವಂತೆ ಬಲವಂತಪಡಿಸಿದ ತಂಡದಲ್ಲಿದ್ದ 17 ವರ್ಷದ ಬಾಲಕನನ್ನು ಸರಕಾರದ ಬಾಲ ಸಂಸ್ಕಾರ ಕೇಂದ್ರಕ್ಕೆ ಕಳುಹಿಸಿ ಕೊಡಲಾಯಿತು. ಇತರರಾದ ಇಮ್ರಾನ್ ಬಾಷಾ (22), ಅಶ್ರಫ್ ಬಾಷಾ (20), ಮುಹಮ್ಮದ್ ಫೈಝಲ್ (23), ಸಂತೋಷ್ (23), ಇಬ್ರಾಹಿಂ ಬಾಷಾ, (24) ಹಾಗೂ ಪ್ರಶಾಂತ್ (20)ನನ್ನು ಬಂಧಿಸಲಾಯಿತು ಎಂದು ಅವರು ತಿಳಿಸಿದ್ದಾರೆ.

ಈ ಯುವಕರಲ್ಲಿ ಹೆಚ್ಚಿನವರು ಆಟೋ ರಿಕ್ಷಾ ಚಾಲಕರು. ಅವರು ಕೋಟೆಗೆ ಭೇಟಿ ನೀಡುವ ಹಿಜಾಬ್ ಧರಿಸಿದ ಮಹಿಳೆಯರನ್ನು ಗುರಿಯಾಗಿರಿಸಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾರ್ಚ್ 27ರಂದು ನಡೆದ ಈ ಘಟನೆಯ ಹಿಂದಿನ ಉದ್ದೇಶವನ್ನು ತನಿಖೆ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಹಾಕಲಾದ ವೀಡಿಯೊವನ್ನು ಶೇರ್ ಮಾಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ ಎಂದು ವೆಲ್ಲೂರು ಡಿಎಸ್ಪಿ ಎಸ್. ರಾಜೇಶ್ ಕಣ್ಣನ್ ತಿಳಿಸಿದ್ದಾರೆ.

Similar News