ಕ್ಷಿಪ್ರವಾಗಿ ಹರಡುತ್ತಿರುವ ಕೋವಿಡ್ ಸೋಂಕು: 3 ಸಾವಿರ ತಲುಪಿದ ದೈನಿಕ ಪ್ರಕರಣ

Update: 2023-03-31 02:07 GMT

ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಸೋಂಕಿನ ದೈನಿಕ ಪ್ರಕರಣ 2000 ದಾಟಿದ ಒಂದೇ ದಿನದಲ್ಲಿ ಹೊಸ ಪ್ರಕರಣಗಳ ಸಂಖ್ಯೆ 3000ದ ಗಡಿ ದಾಟಿದೆ. ದೇಶದಲ್ಲಿ ಸೋಂಕು ಕ್ಷಿಪ್ರವಾಗಿ ಹರಡುತ್ತಿರುವುದರ ಸ್ಪಷ್ಟ ಸೂಚಕ ಇದಾಗಿದೆ. ಬುಧವಾರ ಏಳು ದಿನಗಳ ದೈನಿಕ ಸರಾಸರಿ ಒಂದು ವಾರದಲ್ಲಿ ದ್ವಿಗುಣಗೊಂಡಿದೆ.

ಬುಧವಾರ ದೇಶದಲ್ಲಿ 3016 ಹೊಸ ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾದ್ದು, ಕಳೆದ ವರ್ಷದ ಅಕ್ಟೋಬರ್ 2ರಂದು ದಾಖಲಾದ ಪ್ರಕರಣಗಳ ಬಳಿಕ ಇದು ಗರಿಷ್ಠ ಸಂಖ್ಯೆಯಾಗಿದೆ. ಮಂಗಳವಾರ ದೇಶದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಎರಡು ಸಾವಿರದ ಗಡಿ (2151) ದಾಟಿತ್ತು. ಕಳೆದ ವರ್ಷದ ಅಕ್ಟೋಬರ್ 21ರ ಬಳಿಕ ಇದೇ ಮೊದಲ ಬಾರಿಗೆ ಒಂದೇ ದಿನ 2 ಸಾವಿರಕ್ಕೂ ಅಧಿಕ ಪ್ರಕರಣ ವರದಿಯಾಗಿತ್ತು.

ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಕಡಿಮೆಯಾದರೂ, ಆರೋಗ್ಯ ಸಂಕೀರ್ಣತೆಗಳ ಬಗ್ಗೆ ಸಾಂಕ್ರಾಮಿಕ ರೋಗ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಬುಧವಾರ ಸೋಂಕಿಗೆ ಆರು ಮಂದಿ ಬಲಿಯಾಗಿದ್ದು, ಕೇರಳದಲ್ಲಿ ಎಂಟು ಹಳೆಯ ಸಾವಿನ ಪ್ರಕರಣ ಬೆಳಕಿಗೆ ಬಂದಿದೆ. ಮಂಗಳವಾರ ಏಳು ಮಂದಿ ಮೃತಪಟ್ಟಿದ್ದು, ಇದುವರೆಗೆ ಈ ವಾರ 17 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ಕೇರಳ, ದೆಹಲಿ, ಹಿಮಾಚಲ ಮತ್ತು ಹರ್ಯಾಣದಲ್ಲಿ ಕಳೆದ ಎರಡು ದಿನಗಳಿಂದ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿದ್ದು, ಮಹಾರಾಷ್ಟ್ರ, ಕರ್ನಾಟಕ, ಗುಜರಾತ್ ಹಾಗೂ ತಮಿಳುನಾಡಿನಲ್ಲೂ ದೊಡ್ಡ ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾಗುತ್ತಿವೆ.

Similar News