ಜೈಲಿನಲ್ಲಿ ಮಗಳು ಅನಾರೋಗ್ಯದಲ್ಲಿದ್ದಾಳೆ, ಉಪವಾಸ ಆಚರಿಸಲಾಗುತ್ತಿಲ್ಲ: ಹೋರಾಟಗಾರ್ತಿ ಗುಲ್ಫಿಶಾ ಫಾತಿಮಾ ತಾಯಿ

2020ರ ದಿಲ್ಲಿ ಗಲಭೆ ಪ್ರಕರಣ

Update: 2023-03-31 10:46 GMT

ಹೊಸದಿಲ್ಲಿ: 2020ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಕಠಿಣ ಉಗ್ರನಿಗ್ರಹ ಕಾಯ್ದೆಯಡಿ ಬಂಧಿತರಾಗಿರುವ ಹೋರಾಟಗಾರ್ತಿ ಗುಲ್ಫಿಶಾ ಫಾತಿಮಾ ಆರೋಗ್ಯ ಸರಿಯಿಲ್ಲದಿರುವುದರಿಂದ ಆಕೆ ರೋಝಾ (ರಮಝಾನ್‌ ಉಪವಾಸ) ಆಚರಿಸಲು ಸಾಧ್ಯವಾಗುತ್ತಿಲ್ಲ ಎಂದು ಆಕೆಯ ತಾಯಿ ಅಳಲು ತೋಡಿಕೊಂಡಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡು ಸದ್ಯ ಬಂಧಿತರಾಗಿರುವ ಹೋರಾಟಗಾರರ ಕುಟುಂಬಗಳ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನ್ನ ಪುತ್ರಿ ಮೂರು ವರ್ಷಗಳಿಂದ ಜೈಲಿನ ಸರಳಿನ ಹಿಂದೆ ಬಂಧಿತಳಾಗಿದ್ದಾಳೆ. ಕಳೆದ ಎರಡು ತಿಂಗಳ ಹಿಂದೆ ಆಕೆಗೆ ಜಾಮೀನು ದೊರೆತಿದ್ದರೂ ಇನ್ನೂ ಬಿಡುಗಡೆಯಾಗಬೇಕಿದೆ ಎಂದು ಹೇಳಿದ್ದಾರೆ.

"ನಾನು ಪದೇ ಪದೇ ನ್ಯಾಯಾಲಯಗಳಿಗೆ ಸುತ್ತುತ್ತಿದ್ದೇನೆ. ಆಕೆ ಕೂಡಲೇ ಸ್ವತಂತ್ರಗೊಂಡು ಹೊರ ಬರಲಿದ್ದಾಳೆ ಎಂಬುದು ನನ್ನ ವಿಶ್ವಾಸವಾಗಿದೆ. ಸರ್ಕಾರಗಳು ಮಕ್ಕಳನ್ನು ಶಿಕ್ಷಿತರನ್ನಾಗಿಸುವಂತೆ ಒತ್ತಡ ಹೇರುತ್ತವೆ. ಮಕ್ಕಳನ್ನು ಶಿಕ್ಷಿತರನ್ನಾಗಿಸಿದ ಫಲಿತಾಂಶ ಇದೇನಾ?" ಎಂದು ಆಕೆ ಪ್ರಶ್ನಿಸಿದ್ದಾರೆ.

ಗಲಭೆಯ ಹಿಂದೆ ಭಾರಿ ಪಿತೂರಿ ನಡೆದಿದೆ ಎಂದು ಕೆಲವು ಹೋರಾಟಗಾರರನ್ನು ಯುಎಪಿಎ ಕಾಯ್ದೆಯಡಿ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ಕೋರಿ ಗುಲ್ಫಿಶಾ ಫಾತಿಮಾ ದಿಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದೇ ಪ್ರಕರಣದಲ್ಲಿ ಬಂಧಿತರಾಗಿರುವ ಮುಹಮ್ಮದ್ ಸಲೀಂ ಖಾನ್ ಅವರ ಪುತ್ರಿ ಸೈಮಾ ಖಾನ್, "ಜೈಲಿನಲ್ಲಿ ಏನು ತೊಂದರೆ ಅನುಭವಿಸುತ್ತಿದ್ದೇನೆ ಎಂಬ ಕುರಿತು ನನ್ನ ತಂದೆ ಈವರೆಗೆ ಏನನ್ನೂ ಹೇಳಿಲ್ಲ" ಎಂದು ತಿಳಿಸಿದ್ದಾರೆ.

"ನನ್ನ ತಂದೆಯ ಜಾಮೀನು ಮನವಿಯ ಕುರಿತ ಆದೇಶವನ್ನು ಹೈಕೋರ್ಟ್‌ನಲ್ಲಿ ಕಾಯ್ದಿರಿಸಲಾಗಿದೆ. ಅವರು ಬಂಧನವಾದಾಗಿನಿಂದ ನಮ್ಮಿಬ್ಬರ ಬದುಕೂ ದುಸ್ತರವಾಗಿದೆ. ಜೈಲಿನಲ್ಲಿ ಅನುಭವಿಸುತ್ತಿರುವ ತೊಂದರೆಗಳ ಕುರಿತು ನನ್ನ ತಂದೆ ಈವರೆಗೆ ಏನನ್ನೂ ಹಂಚಿಕೊಂಡಿಲ್ಲ" ಎಂದು ಸೈಮಾ ಖಾನ್ ಅಳಲು ತೋಡಿಕೊಂಡಿದ್ದಾರೆ.

ಹೋರಾಟಗಾರ ಅಥರ್ ಖಾನ್ ಅವರ ತಾಯಿ ನೂರ್ ಜಹಾನ್, "ನನ್ನ ಪುತ್ರನ ಬಂಧನವಾದಾಗ ಆತ ಬಿಬಿಎ ವ್ಯಾಸಂಗ ಮಾಡುತ್ತಿದ್ದ. ಆತನ ವಿರುದ್ಧ ಯುಎಪಿಎ ಕಾಯ್ದೆಯ ಒಂದು ಪ್ರಕರಣ ಸೇರಿದಂತೆ ಒಟ್ಟು ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ" ಎಂದು ತಿಳಿಸಿದ್ದಾರೆ.

"ಆತನಿಗೆ ಎರಡು ಪ್ರಕರಣಗಳಲ್ಲಿ ಜಾಮೀನು ದೊರೆಯಿತಾದರೂ ಯುಎಪಿಎ ಕಾಯ್ದೆಯ ಪ್ರಕರಣದಲ್ಲಿ ಈವರೆಗೆ ಜಾಮೀನು ದೊರೆತಿಲ್ಲ. ಈ ಪ್ರಕರಣದ ವಿಚಾರಣೆಯೀಗ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ" ಎಂದು ಹೇಳಿದ್ದಾರೆ.

ಫೆಬ್ರವರಿ 24, 2020ರಂದು ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಗರು ಹಾಗೂ ವಿರೋಧಿಗಳ ನಡುವೆ ಘರ್ಷಣೆ ಸ್ಫೋಟಗೊಂಡಿತ್ತು. ಈ ಗಲಭೆಯಲ್ಲಿ 53 ಮಂದಿ ಮೃತಪಟ್ಟು, ಸುಮಾರು 200 ಮಂದಿ ಗಾಯಗೊಂಡಿದ್ದರು.

Similar News