ಡಾ. ರಾಘವೇಂದ್ರ ಯು.ಗೆ ಪ್ರತಿಷ್ಠಿತ ಪ್ರೊ.ಸತೀಶ್ ಧವನ ಪ್ರಶಸ್ತಿ ಪ್ರದಾನ

Update: 2023-03-31 16:10 GMT

ಉಡುಪಿ : ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್‌ನ (ಮಾಹೆ) ಉಪಕುಲಸಚಿವ (ಆಡಳಿತ) ಹಾಗೂ ಸಹ ಪ್ರಾಧ್ಯಾಪಕ ಡಾ.ರಾಘೇವೇಂದ್ರ ಯು. ಅವರು ಕರ್ನಾಟಕ ಸರಕಾರ ಇಂಜಿನಿಯರಿಂಗ್ ಸಾಯನ್ಸ್‌ ನಲ್ಲಿ ನೀಡುವ ಪ್ರತಿಷ್ಠಿತ ಪ್ರೊ.ಸತೀಶ್ ಧವನ್ ರಾಜ್ಯಮಟ್ಟದ ಯುವ ಇಂಜಿನಿಯರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಾಯನ್ಸ್‌ನ ಜೆ.ಎನ್. ಟಾಟಾ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಡಾ.ರಾಘವೇಂದ್ರ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯದ ಉನ್ನತ ಶಿಕ್ಷಣ, ಇಲೆಕ್ಟ್ರಾನಿಕ್ಸ್, ಐಟಿ, ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವಥನಾರಾಯಣ, ಭಾರತ ರತ್ನ ಪುರಸ್ಕೃತ ವಿಜ್ಞಾನಿ ಪ್ರೊ.ಸಿ.ಎನ್.ಆರ್.ರಾವ್, ಇಸ್ರೋದ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್‌ಕುಮಾರ್ ಹಾಗೂ ಐಐಎಸ್‌ಸಿಯ ನಿರ್ದೇಶಕ ಪ್ರೊ.ಗೋವಿಂದನ ರಂಗರಾಜನ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ ಉಪಸ್ಥಿತರಿದ್ದರು.

ಡಾ.ರಾಘವೇಂದ್ರ ಯು. ಅವರು ಪ್ರತಿಷ್ಠಿತ ಪತ್ರಿಕೆಗಳಲ್ಲಿ 50ಕ್ಕೂ ಅಧಿಕ  ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಸದ್ಯ ಅವರು ಹಲವು ಸಂಶೋಧಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತಿ ದ್ದಾರೆ. ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದ ಹಲವು ಸಂಶೋಧನೆಗಳಲ್ಲಿ ಪಾಲ್ಗೊಂಡಿದ್ದಾರೆ.

ಅಮೆರಿಕದ ಸ್ಟಾನ್‌ಫೋರ್ಡ್ ವಿವಿ ಇತ್ತೀಚೆಗೆ ಪ್ರಕಟಿಸಿದ ವಿಶ್ವದ ಇಬ್ಬರು  ಉತ್ತಮ ಸಂಶೋಧಕರಲ್ಲಿ ಒಬ್ಬರಾಗಿ ಆಯ್ಕೆಯಾಗಿದ್ದರು. ರಾಜ್ಯದ ಯುವ ಇಂಜಿನಿಯರ್ ಪ್ರಶಸ್ತಿಗೆ ಪಾತ್ರರಾದ ಡಾ.ರಾಘವೇಂದ್ರ ಇವರಿಗೆ ಮಾಹೆ  ವಿವಿ ಹಾಗೂ ಮಣಿಪಾಲ ಎಂಐಟಿ ಸಂಸ್ಥೆಗಳ ಮುಖ್ಯಸ್ಥರು ಅಭಿನಂದಿಸಿದ್ದಾರೆ.

Similar News