ಔರಂಗಾಬಾದ್: ಅಥೇರಿ ಗ್ರಾಮದಲ್ಲಿ ಗುಂಪು ಘರ್ಷಣೆ , ಕಲ್ಲುತೂರಾಟ

Update: 2023-03-31 16:52 GMT

ಔರಂಗಾಬಾದ್ , ಮಾ.31: ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಅಥೇರಿ ಗ್ರಾಮದಲ್ಲಿ ಶುಕ್ರವಾರ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿದ್ದು, ಕಲ್ಲುತೂರಾಟ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

CRPF ಸೇರಿದಂತೆ ಭಾರೀ ಸಂಖ್ಯೆಯ ಪೊಲೀಸ್ ಪಡೆಯನ್ನು ಶಾಂತಿಪಾಲನೆಗಾಗಿ ಅಥೇರಿ ಗ್ರಾಮಕ್ಕೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಉನ್ನತ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರು ಸ್ಥಳದಲ್ಲಿ ಬೀಡುಬಿಟ್ಟಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ.

ಔರಂಗಬಾದ್ ನಲ್ಲಿ ಹಿಂಸಾಚಾರ: ಓರ್ವ ಮೃತ್ಯು, 7 ಮಂದಿ ಬಂಧನ

 ಔರಂಗಾಬಾದ್ ನಗರದಲ್ಲಿ ಗುರುವಾರ ತಡರಾತ್ರಿ ನಡೆದ ಭೀಕರ ಘರ್ಷಣೆಯಲ್ಲಿ 15ಕ್ಕೂ ಅಧಿಕ ಪೊಲೀಸರು ಗಾಯಗೊಂಡಿದ್ದರು ಮತ್ತು 20 ಪೊಲೀಸ್ ಹಾಗೂ ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು ಮತ್ತು ಕಲ್ಲುತೂರಾಟದ ಹಲವಾರು ಘಟನೆಗಳು ವರದಿಯಾಗಿದ್ದವು. ಹಿಂಸಾಚಾರದಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೊಬ್ಬ ಶುಕ್ರವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

 ಔರಂಗಾಬಾದ್ ನ ಕಿರಾಡ್ಪುರ ಪ್ರದೇಶದಲ್ಲಿ ರಾಮದೇವಾಲಯದ ಬಳಿ ಗುರುವಾರ ತಡರಾತ್ರಿ ಘರ್ಷಣೆ ಭುಗಿಲೆದ್ದಿತ್ತು.ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸಿದಾಗ 500 ಮಂದಿಯಷ್ಟಿದ್ದ ಗುಂಪು ಕಲ್ಲುಗಳು ಹಾಗೂ ಪೆಟ್ರೋಲ್ ಬಾಂಬ್ ಗಳೊಂದಿಗೆ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿತ್ತು. ಹಿಂಸಾಚಾಕ್ಕೆ ಸಂಬಂಧಿಸಿ ಕನಿಷ್ಠ ಏಳು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿಯೂ ಗುರುವಾರ ಘರ್ಷಣೆ ಭುಗಿಲೆದ್ದಿತ್ತು ಹಾಗೂ ಈ ಸಂಬಂಧ ಹಲವರನ್ನು ಬಂಧಿಸಲಾಗಿತ್ತು. ಅಲ್ಲಿ ಪರಿಸ್ಥಿತಿ ಶಾಂತವಾಗಿದೆ ಎಂದು ವರದಿಗಳು ತಿಳಿಸಿವೆ.

ಈ ಮಧ್ಯೆ ಮುಂಬೈನ ಉಪನಗರವಾದ ಮಲಾಡ್ ನ ಅಲ್ಪಸಂಖ್ಯಾತರ ಬಾಹುಳ್ಯದ ಮಲ್ವಾನಿ ಪ್ರದೇಶದಲ್ಲಿಯೂ ಗುರುವಾರ ರಾತ್ರಿ ಎರಡು ಗುಂಪುಗಳ ನಡುವೆ ಕಲ್ಲುತೂರಾಟದ ಘಟನೆ ವರದಿಯಾಗಿದೆ ಹಾಗೂ 25 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲಿ ಪರಿಸ್ಥಿತಿ ಸಹಜತೆಗೆ ಮರಳಿದೆ ಮತ್ತು ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

Similar News