ತಮಿಳುನಾಡು| ಐಪಿಎಸ್ ಅಧಿಕಾರಿಯಿಂದ ಕಸ್ಟಡಿಯಲ್ಲಿ ಬಂಧಿತರಿಗೆ ಚಿತ್ರಹಿಂಸೆ: ಆರೋಪ

Update: 2023-03-31 17:24 GMT

ಹೊಸದಿಲ್ಲಿ,ಮಾ.31: ಐಪಿಎಸ್ ಅಧಿಕಾರಿಯೊಬ್ಬರು ತಮಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ್ದಾರೆಂದು ಆರೋಪಿಸಿ ತಾವು ನೀಡಿದ್ದ ಹೇಳಿಕೆಯನ್ನು ಹಿಂತೆಗೆದುಕೊಳ್ಳುವಂತೆ ತಮ್ಮ ಮೇಲೆ ಒತ್ತಡ ಹೇರಲಾಗುತ್ತಿದೆಯೆಂದು ತಮಿಳುನಾಡಿನ ಜೈಲೊಂದರಲ್ಲಿ ಬಂಧನದಲ್ಲಿರುವ ಕೆಲವು ಕೈದಿಗಳು ಆಪಾದಿಸಿದಾರೆ.

ತಿರುನಲ್ವೇಲಿ ಜಿಲ್ಲೆಯ ಅಂಬಾಸಮುದ್ರಂ ಪೊಲೀಸ್ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಬಲವೀರ್ಸಿಂಗ್(Balveer singh) ಅವರು ಕಸ್ಟಡಿಯಲ್ಲಿ ತಮಗೆ ಚಿತ್ರಹಿಂಸೆ ನೀಡಿದ್ದು, ತಮ್ಮ ಹಲ್ಲುಗಳನ್ನು ಮುರಿದುಹಾಕಿದ್ದಾರೆ ಹಾಗೂ ಅವರ ವೃಷಣಗಳನ್ನು ಜಜ್ಜಿದ್ದಾರೆಂದು ಬಂಧಿತರು ಆಪಾದಿಸಿದ್ದರು.

ಬಲವೀರ್ಸಿಂಗ್ ಅವರನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್(M. K.Stalin) ಅವರು ಬುಧವಾರ ಅಮಾನತುಗೊಳಿಸಿದ್ದಾರೆ ಹಾಗೂ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ.

‘‘ ಪೊಲೀಸ್ ಠಾಣೆಯಲ್ಲಿ ಯಾವುದೇ ರೀತಿಯ ಮಾನವಹಕ್ಕುಗಳ ಉಲ್ಲಂಘನೆಗಳನ್ನು ನಾವು ಸಹಿಸಲಾರೆವು’’ ಎಂದು ವಿಧಾನಸಭೆಯಲ್ಲಿ ಸ್ಟಾಲಿನ್ ಘಟನೆಯ ಬಗ್ಗೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ ತಿಳಿಸಿದರು. ತನಿಖೆಯು ಪೂರ್ಣಗೊಂಡ ಬಳಿಕ ಹಾಗೂ ಸಂಪೂರ್ಣ ವರದಿ ಬಂದ ಬಳಿಕ ಘಟನೆಯಲ್ಲಿ ಶಾಮೀಲಾದವರೆಲ್ಲರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’’ ಎಂದವರು ತಿಳಿಸಿದರು.

ತಾವು ನೀಡಿದ್ದ ಹೇಳಿಕೆಗಳನ್ನು ಹಿಂತೆಗೆದುಕೊಳ್ಳುವಂತೆ ತಮ್ಮ ಮೇಲೆ ಒತ್ತಡ ಹೇರಲಾಗುತ್ತಿದೆಯೆಂದು ಕಸ್ಟಡಿಯಲ್ಲಿ ಬಲವೀರ್ಸಿಂಗ್ ಅವರಿಂದ ಚಿತ್ರಹಿಂಸೆಗೊಳಗಾಗಿದ್ದಾರೆನ್ನಲಾದ 13 ಮಂದಿ ವ್ಯಕ್ತಿಗಳು , ಆರೋಪಿಸಿದ್ದಾರೆ. ಸಿಂಗ್ ಅವರ ಅಧಿಕಾರವ್ಯಾಪ್ತಿಯಲ್ಲಿರುವ ಕಲ್ಲಿಡೈಕುರುಚ್ಚಿ, ಅಂಬಾಸಮುದ್ರಂ ಹಾಗೂ ವಿಕ್ರಮಸಿಂಗಪುರಂ ಪೊಲೀಸ್ ಠಾಣಾ ವ್ಯಾಪ್ತಿಯ  ಪ್ರದೇಶಗಳಿಗೆ ಸೇರಿದವರಾಗಿದ್ದಾರೆ.

ಬಂಧಿತರಲ್ಲೊಬ್ಬನಾದ ಸೂರ್ಯ ಎಂಬಾತ ಬಲವೀರ್ ಸಿಂಗ್ ವಿರುದ್ಧ ತಾನು ನೀಡಿದ್ದ ಹೇಳಿಕೆಯನ್ನು ಬುಧವಾರ ಹಿಂತೆಗೆದುಕೊಂಡಿದ್ದನು. ತಾನು ಪಾನಮತ್ತನಾಗಿದ್ದಾಗ ಮೂರು ಸಿಸಿಟಿವಿ ಕ್ಯಾಮರಾಗಳಿಗೆ ಹಾನಿ ಮಾಡಿದ್ದಕ್ಕಾಗಿ ರೋಷಗೊಂಡ ಬಲವೀರ್ಸಿಂಗ್ ತನಗೆ ಚಿತ್ರಹಿಂಸೆ ನೀಡಿದ್ದಾಗಿ ಸೂರ್ಯ ಆಪಾದಿಸಿದ್ದನು.

Similar News