ಆನ್‌ಲೈನ್ ವಿಷಯಗಳ ಕೇಂದ್ರ ಸರಕಾರದ ನಿಯಂತ್ರಣಕ್ಕೆ ಬ್ರಾಡ್ ಬ್ಯಾಂಡ್ ಇಂಡಿಯಾ ಫಾರಮ್ ಆಕ್ಷೇಪ

Update: 2023-03-31 17:06 GMT

ಹೊಸದಿಲ್ಲಿ, ಮಾ. 31: ಪ್ರಸ್ತಾಪಿತ ಡಿಜಿಟಲ್ ಇಂಡಿಯಾ ಮಸೂದೆ, 2023ರ ಅಡಿಯಲ್ಲಿ, ಆನ್ಲೈನ್ ವಿಷಯಗಳನ್ನು ತಡೆಗಟ್ಟಲು ಕೇಂದ್ರ ಸರಕಾರಕ್ಕೆ ಅಧಿಕಾರ ನೀಡಿದರೆ ಬಹುದೊಡ್ಡ ಪ್ರಮಾದವಾಗುತ್ತದೆ ಎಂದು ಬ್ರಾಡ್ ಬ್ಯಾಂಡ್ ಇಂಡಿಯಾ ಫಾರಮ್ (BIF) ಎಂಬ ಚಿಂತಕರ ವೇದಿಕೆ ಎಚ್ಚರಿಸಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ಇದರ ಸ್ಥಾನವನ್ನು ನೂತನ ಮಸೂದೆಯು ವಹಿಸಿಕೊಳ್ಳಲಿದೆ.

2000ದ ಮಾಹಿತಿ ತಂತ್ರಜ್ಞಾನ ಕಾಯ್ದೆಯ 69ಎ ಪರಿಚ್ಛೇದದಡಿ, ಯಾವುದೇ ಕಂಪ್ಯೂಟರ್ನಿಂದ ಬರುವ ಯಾವುದೇ ಮಾಹಿತಿಯು ಸಾರ್ವಜನಿಕರಿಗೆ ಸಿಗದಂತೆ ತಡೆಯಲು ನಿರ್ದೇಶನಗಳನ್ನು ನೀಡುವ ಅಧಿಕಾರವನ್ನು ಸರಕಾರ ಹೊಂದಿದೆ. ಸರಕಾರವು ತನ್ನ ನಿರ್ಧಾರಕ್ಕೆ ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ರಕ್ಷಣೆ, ಭದ್ರತೆ, ವಿದೇಶಗಳೊಂದಿಗಿನ ಸ್ನೇಹ ಸಂಬಂಧಗಳು ಮತ್ತು ಸಾರ್ವಜನಿಕ ವ್ಯವಸ್ಥೆ ಮುಂತಾದ ಕಾರಣಗಳನ್ನು ನೀಡಬಹುದಾಗಿದೆ.

ಆದರೆ, ‘‘ಹಾನಿಕಾರಕ ಮತ್ತು ಕಾನೂನುಬಾಹಿರ ವಿಷಯಗಳನ್ನು ನಿಭಾಯಿಸಲು ಮಾಹಿತಿ ತಂತ್ರಜ್ಞಾನ ಕಾಯ್ದೆಯಲ್ಲಿ ಪರಿಣಾಮಕಾರಿ ನಿಯಂತ್ರಣಗಳಿಲ್ಲ’’ ಎಂದು ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ನೂತನ ಮಸೂದೆಗೆ ಸಂಬಂಧಿಸಿದ ತನ್ನ ವಿವರಣೆಯಲ್ಲಿ ಹೇಳಿದೆ.

ಮಸೂದೆಯ ಕರಡು ಇನ್ನೂ ತಯಾರಾಗಿಲ್ಲ.

ಗೂಗಲ್, ಮೆಟ, ಅಮೆಝಾನ್ ಮತ್ತು ಮೈಕ್ರೋಸಾಫ್ಟ್ ಮುಂತಾದ ಕಂಪೆನಿಗಳನ್ನು ಬಿಐಎಫ್(BIF) ಪ್ರತಿನಿಧಿಸುತ್ತದೆ. ಆನ್ಲೈನ್ ವಿಷಯಗಳನ್ನು ತಡೆಗಟ್ಟುವ ಬೇಡಿಕೆಗಳನ್ನು ಪಾರದರ್ಶಕವಾಗಿ ಇತ್ಯರ್ಥಪಡಿಸಲು ಸ್ವತಂತ್ರ ಮತ್ತು ತಟಸ್ಥ ಸಂಸ್ಥೆಯೊಂದನ್ನು ಸ್ಥಾಪಿಸುವಂತೆ ಅದು ತನ್ನ ವರದಿಯಲ್ಲಿ ಕರೆ ನೀಡಿದೆ ಎಂದು ‘ಫೈನಾನ್ಶಿಯಲ್ ಎಕ್ಸ್ಪ್ರೆಸ್’ ಹೇಳಿದೆ.

ಇಂಟರ್ನೆಟ್ ನಲ್ಲಿ ವಿಷಯಗಳನ್ನು ತಡೆಗಟ್ಟುವಂತೆ ಸಾಮಾಜಿಕ ಮಾಧ್ಯಮಗಳು ಮತ್ತು ಇಂಟರ್ನೆಟ್ ಸೇವೆ ಪೂರೈಕೆದಾರರು ಮುಂತಾದ ಮಧ್ಯಸ್ಥಿಕೆದಾರರಿಗೆ (ಇಂಟರ್ಮೀಡಿಯರೀಸ್) ಸರಕಾರ ನೀಡುವ ಆದೇಶಗಳು ಸೆನ್ಸಾರ್ಶಿಪ್ ಗೆ  ಸಮವಾಗಿರುತ್ತವೆ ಮತ್ತು ಅದು ವಿಷಯಗಳ ಸೃಷ್ಟಿಕರ್ತರ ಮುಕ್ತವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮತ್ತು ಮಾಹಿತಿಗಳನ್ನು ಸ್ವೀಕರಿಸುವ ಸಾರ್ವಜನಿಕರ ಹಕ್ಕುಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಬಿಐಎಫ್ ವರದಿ ಹೇಳುತ್ತದೆ.

ದೂರು ಇತ್ಯರ್ಥ ಅಧಿಕಾರಿಗಳ ನಿರ್ಧಾರಗಳ ವಿರುದ್ಧ ಅಥವಾ ತಮಗೆ ಸಲ್ಲಿಸಲಾಗಿರುವ ದೂರುಗಳ ಬಗ್ಗೆ ಕ್ರಮ ತೆಗೆದುಕೊಳ್ಳುವಲ್ಲಿನ ಅವರ ವೈಫಲ್ಯದ ವಿರುದ್ಧ ಮಧ್ಯಸ್ಥಿಕೆದಾರರು ಮೇಲ್ಮನವಿ ಸಲ್ಲಿಸಲು ದೂರು ಮೇಲ್ಮನವಿ ಸಮಿತಿಗಳು ಮಾರ್ಚ್ 1ರಿಂದು ಅಸ್ತಿತ್ವಕ್ಕೆ ಬಂದಿವೆ ಎಂದು ಸರಕಾರ ಇತ್ತೀಚೆಗೆ ಘೋಷಿಸಿದೆ.

ಇದೊಂದು ಶ್ರೇಷ್ಠ ಕಲ್ಪನೆಯಾದರೂ, ‘‘ಈ ಸಮಿತಿಗಳು ಸ್ವತಂತ್ರ ಇತ್ಯರ್ಥ ವ್ಯವಸ್ಥೆಯಾಗುವ ಬದಲು, ಕೇಂದ್ರ ಸರಕಾರದ ಅಡಿಯಾಳಾಗಿವೆ’’ ಎಂಬುದಾಗಿ ‘ದ ವಯರ್’ಗಾಗಿ ಮಾಡಿರುವ ವಿಶ್ಲೇಷಣೆಯಲ್ಲಿ ಪ್ರತೀಕ್ ವ್ರಾೆ ಮತ್ತು ಜೇಜಸಿ ಪಂಜಿಯರ್ ಬರೆಯುತ್ತಾರೆ.

Similar News